Asianet Suvarna News Asianet Suvarna News

ಕಳ್ಳತನ, ದರೋಡೆ, ಪಿಕ್‌ಪಾಕೆಟ್‌, ಸುಲಿಗೆ ಕಲಿಸಲು ಶುರುವಾಗಿದೆ ಸ್ಕೂಲ್: ಬಾಡಿಗೆಗೂ ಸಿಗ್ತಾರೆ ಪಕ್ಕಾ ಕ್ರಿಮಿನಲ್‌ಗಳು!

ದೇಶದ ಹಲವು ಹಳ್ಳಿಗಳು, ನಗರಗಳು ತಮ್ಮ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಾಗಿ ಖ್ಯಾತಿ ಹೊಂದಿದ್ದರೆ, ಮಧ್ಯಪ್ರದೇಶದ ಮೂರು ಗ್ರಾಮಗಳು ತಾವು ನೀಡುವ ಶಿಕ್ಷಣಕ್ಕಾಗಿ ಪಡೆದಿರುವ ಕುಖ್ಯಾತಿ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಚಿತ. 

A school in Bhopal has started teaching theft robbery pickpocketing and extortion gvd
Author
First Published Aug 21, 2024, 7:21 AM IST | Last Updated Aug 21, 2024, 7:21 AM IST

ಭೋಪಾಲ್‌ (ಆ.21): ದೇಶದ ಹಲವು ಹಳ್ಳಿಗಳು, ನಗರಗಳು ತಮ್ಮ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಾಗಿ ಖ್ಯಾತಿ ಹೊಂದಿದ್ದರೆ, ಮಧ್ಯಪ್ರದೇಶದ ಮೂರು ಗ್ರಾಮಗಳು ತಾವು ನೀಡುವ ಶಿಕ್ಷಣಕ್ಕಾಗಿ ಪಡೆದಿರುವ ಕುಖ್ಯಾತಿ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಚಿತ. ಕಾರಣ, ಈ ಗ್ರಾಮಗಳಲ್ಲಿ ಮಕ್ಕಳಿಗೆ ನೀಡುವುದು ಶಾಲಾ ಶಿಕ್ಷಣವಲ್ಲ, ಬದಲಾಗಿ ಕಳ್ಳತನ, ದರೋಡೆ, ಪಿಕ್‌ಪಾಕೆಟ್‌, ಅಕ್ರಮ ಮದ್ಯ ಮಾರಾಟ, ಸುಲಿಗೆ ತರಬೇತಿ! ನಿಜ. ರಾಜಧಾನಿ ಭೋಪಾಲ್‌ನಿಂದ 117 ಕಿ.ಮೀ ದೂರದ ರಾಜ್‌ಘರ್‌ ಜಿಲ್ಲೆಗೆ ಸೇರಿದ ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ ಗ್ರಾಮಗಳು ಕ್ರಿಮಿನಲ್‌ಗಳನ್ನು ಉತ್ಪಾದಿಸುವ ಕಾರ್ಖಾನೆಗಳೆಂದೇ ಕುಖ್ಯಾತಿ ಹೊಂದಿವೆ.

ಕುಖ್ಯಾತಿ: ಈ ಗ್ರಾಮಗಳಲ್ಲಿರುವ ಹಲವು ಗ್ಯಾಂಗ್‌ಗಳು ತಮ್ಮದೇ ಆದ ಪ್ರತ್ಯೇಕ ‘ತರಬೇತಿ’ ಕೇಂದ್ರ ಹೊಂದಿವೆ. ಅಲ್ಲಿ ಹಣಕ್ಕೆ ತಕ್ಕಂತೆ ವಿವಿಧ ರೀತಿ ದುಷ್ಕೃತ್ಯಗಳ ತರಬೇತಿ ನೀಡಲಾಗುತ್ತಿದೆ. ತರಬೇತಿ ಶುಲ್ಕ 50000 ರು.ನಿಂದ 3 ಲಕ್ಷ ರು. ತರಬೇತಿ ಅವಧಿ 3 ತಿಂಗಳಿನಿಂದ 1 ವರ್ಷ!

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಸರ್ಕಾರದಿಂದ ಮಹಿಳಾ ವೈದ್ಯರ ಒಳಿತಿಗಾಗಿ ಹಲವು ಕ್ರಮ

ಬೇಕಾದ ಶಾಲೆ ಆಯ್ಕೆ: ಮಧ್ಯಪ್ರದೇಶ ಹಾಗೂ ದೇಶದ ಇತರೆ ಕೆಲವು ರಾಜ್ಯಗಳ ಪೋಷಕರು ಇಲ್ಲಿಗೆ ಆಗಮಿಸಿ ಇಲ್ಲಿನ ಪಾತಕಿ ಗ್ಯಾಂಗ್‌ ಸಂಪರ್ಕಿಸುತ್ತಾರೆ. ಅವರ ದುಷ್ಕೃತ್ಯದ ತರಬೇತಿ ನೋಡಿ ತಮ್ಮ 10-15 ವರ್ಷದ ಮಕ್ಕಳನ್ನು ಪೋಕಷರು ಅಲ್ಲೇ ಬಿಟ್ಟುಹೋಗುತ್ತಾರೆ.

ಪೋಷಕರಿಗೆ ಭರ್ಜರಿ ಸಂಪಾದನೆ: ತರಬೇತಿ ಬಳಿಕ ಬೇಕಿದ್ದರೆ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಇಲ್ಲದೇ ಹೋದಲ್ಲಿ ಸುಲಿಗೆ ಗ್ಯಾಂಗ್‌ಗಳು ಈ ಮಕ್ಕಳನ್ನು ಬಳಸಿಕೊಂಡು ದೇಶವ್ಯಾಪಿ ಕಳ್ಳತನ, ಸುಲಿಗೆ ಕೃತ್ಯ ನಡೆಸುತ್ತದೆ. ಇದಕ್ಕಾಗಿ ಪೋಷಕರಿಗೆ ವಾರ್ಷಿಕ 3-5 ಲಕ್ಷ ರು. ಹಣವನ್ನೂ ನೀಡುತ್ತಾರೆ.

ಹರಾಜೂ ನಡೆಯುತ್ತೆ: ಇನ್ನೊಂದು ವಿಶೇಷವೆಂದರೆ ಈ ಮೂರು ಗ್ರಾಮಗಳ ಧನಿಕರು, ತರಬೇತಿ ಬಳಿಕ ನಿಪುಣರಾಗಿ ಹೊರಹೊಮ್ಮಿದವರನ್ನು ಬಿಡ್‌ ಮಾಡಿ ಇಂತಿಷ್ಟು ಸಮಯಕ್ಕೆ ಎಂದು ಖರೀದಿಸುತ್ತಾರೆ. ಇಂಥ ಬಿಡ್ಡಿಂಗ್‌ 20 ಲಕ್ಷ ರು.ವರೆಗೂ ತಲುಪುತ್ತದೆಯಂತೆ. ಆದರೆ ಇದೇನು ದುಬಾರಿಯಲ್ಲ. ಕಾರಣ. ಈ ಬಿಡ್ಡಿಂಗ್‌ ಹಣದ 4-5 ಪಟ್ಟು ಹಣವನ್ನು ಮಕ್ಕಳು ಒಂದೇ ವರ್ಷದಲ್ಲಿ ಸುಲಿಗೆ ಮೂಲಕ ವಸೂಲಿ ಮಾಡಿಕೊಡುತ್ತಾರೆ.

ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ: ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಬೇಡಿಕೆ

ಇತ್ತೀಚೆಗೆ ಜೈಪುರದಲ್ಲಿ ನಡೆದ ಹೈದರಾಬಾದ್‌ ಮೂಲದ ವ್ಯಾಪಾರಿಯೊಬ್ಬರ ಮಗನ ಮದುವೆ ಸಂದರ್ಭದಲ್ಲಿ ಅಪ್ರಾಪ್ತನೊಬ್ಬ 1.5 ಕೋಟಿ ರು. ಬೆಲೆಯ ಒಡವೆ ಹಾಗೂ 1 ಲಕ್ಷ ರು. ನಗದನ್ನು ಕದ್ದು ತನ್ನ ತಂಡದವರೊಂದಿಗೆ ಕಾವಾಡಿಗಳ ಗುಂಪಿನಲ್ಲಿ ಸೇರಿಕೊಂಡಿದ್ದ. ಆತನ ಬಂಧನದೊಂದಿಗೆ ಈ ಎಲ್ಲಾ ಮಾಹಿತಿಗಳು ಬಹಿರಂಗವಾಗಿವೆ. ಈ ಮೂರೂ ಗ್ರಾಮಗಳ 2000ಕ್ಕೂ ಹೆಚ್ಚು ಜನರ ವಿರುದ್ಧ ದೇಶವ್ಯಾಪಿ 8000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆಯಂತೆ.

Latest Videos
Follow Us:
Download App:
  • android
  • ios