ನವದೆಹಲಿ(ಫೆ.28): ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ವಾಯುದಾಳಿ ನಡೆಸಿದ ಮರುದಿನವೇ, ವಾಯುಪಡೆ ವಿಮಾನದ ಪತನದ ಕಾರಣ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಇಂತಹ ಬಂಧನದಿಂದ ಅಭಿನಂದನ್‌ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಅನ್ವಯ ಅಂದಿನ ಭಾರತೀಯ ಗುಪ್ತಚರ ದಳದ (ರಾ) ಮುಖ್ಯಸ್ಥ ಅನಿಲ್‌ ಧಸ್ಮಾನಾ ನೀಡಿದ ಒಂದು ಖಡಕ್‌ ಸಂದೇಶ.

- ಹೌದು. ಅಭಿನಂದನ್‌ ಬಿಡುಗಡೆ ಆಗಿದ್ದು ಹೇಗೆ ಎಂಬ ಸಂಗತಿಗಳು ಈಗ ಎಳೆಎಳೆಯಾಗಿ ಬಹಿರಂಗವಾಗಿವೆ. ಫೆಬ್ರವರಿ 27ರಿಂದ ಮಾಚ್‌ರ್‍ 1ರ ನಡುವೆ ನಡೆದ 60 ತಾಸಿನ ತೆರೆಮರೆಯ ಕುತೂಹಲಕರ ವಿದ್ಯಮಾನಗಳನ್ನು ವಿವಿಧ ಮೂಲಗಳು ಬಿಚ್ಟಿಟ್ಟಿವೆ. ‘ನಾವೇನೂ ದೀಪಾವಳಿ ಆಚರಣೆಗೆಂದು ಶಸ್ತ್ರಾಸ್ತ್ರ ಇಟ್ಟುಕೊಂಡು ಕೂತಿಲ್ಲ’ ಎಂಬ ಮೋದಿ ಅವರ ಒಂದೇ ಒಂದು ಖಡಕ್‌ ಸಂದೇಶಕ್ಕೆ ಬೆಚ್ಚಿದ ಪಾಕ್‌, ಅಭಿನಂದನ್‌ರನ್ನು ಬಿಡುಗಡೆ ಮಾಡಿತು ಎಂದು ಅವು ಹೇಳಿವೆ.

ಫೆಬ್ರವರಿ 26ರಂದು ಬಾಲಾಕೋಟ್‌ ವಾಯುದಾಳಿ ನಡೆಯಿತು. ಮರುದಿನ ಅಭಿನಂದನ್‌ ಅವರಿದ್ದ ಮಿಗ್‌-21 ಬೈಸನ್‌ ಯುದ್ಧವಿಮಾನವನ್ನು ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಹೊಡೆದುರುಳಿಸಿತು. ಆಗ ಅಭಿನಂದನ್‌ ಅವರು ವಿಮಾನದಿಂದ ಹಾರಿದಾಗ ಅಚಾನಕ್ಕಾಗಿ ಪಾಕಿಸ್ತಾನದ ನೆಲದ ಮೇಲೆ ಹೋಗಿ ಬಿದ್ದರು. ಇವರನ್ನು ಪಾಕಿಸ್ತಾನದ ಜನರು ಹಿಡಿದು ಪಾಕಿಸ್ತಾನದ ಸೇನೆಗೆ ಒಪ್ಪಿಸಿದರು.

ಅಭಿನಂದನ್‌ ತನ್ನ ವಶದಲ್ಲಿರುವಾಗ ಪಾಕಿಸ್ತಾನವು ಅವರ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ದೃಶ್ಯವೊಂದರಲ್ಲಿ ಅವರ ಕಣ್ಣಿಗೆ ಬಟ್ಟೆಕಟ್ಟಲಾಗಿತ್ತು. ಅವರು ರಕ್ತಸಿಕ್ತ ಸ್ಥಿತಿಯಲ್ಲಿದ್ದರು. ಈ ವೇಳೆ ಪಾಕಿಸ್ತಾನದ ಸೇನಾಧಿಕಾರಿಗಳು ಕೆಲವು ಪ್ರಶ್ನೆ ಕೇಳಿದಾಗ ಅಭಿನಂದನ್‌ ತಾಳ್ಮೆಯಿಂದಲೇ ಉತ್ತರಿಸಿದ್ದುದು ಕಂಡುಬಂತು.

ಈ ದೃಶ್ಯಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ನೋಡಿದರು. ಕೂಡಲೇ ಕ್ರುದ್ಧರಾದ ಅವರು, ರಾ ಮುಖ್ಯಸ್ಥ ಧಸ್ಮಾನಾರನ್ನು ಕರೆಸಿಕೊಂಡರು. ‘ಅಭಿನಂದನ್‌ಗೆ ಏನೇ ಆದರೂ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ನಿಮಯದ ಅನುಸಾರ ತಕ್ಷಣವೇ ಅವರನ್ನು ಪಾಕ್‌ ಬಿಡುಗಡೆ ಮಾಡಬೇಕು. ನಾವೇನೂ ದೀಪಾವಳಿ ಆಚರಣೆಗೆಂದು ಶಸ್ತ್ರಾಸ್ತ್ರ ಇಟ್ಟುಕೊಂಡು ಕೂತಿಲ್ಲ. ಇದನ್ನು ಪಾಕ್‌ಗೆ ಸ್ಪಷ್ಟವಾಗಿ ತಿಳಿಸಿ’ ಎಂದರು.

ಕೂಡಲೇ ಪಾಕ್‌ ಗುಪ್ತಚರ ದಳದ ಮುಖ್ಯಸ್ಥ ಲೆ| ಜ| ಸಯ್ಯದ್‌ ಅಸೀಂ ಮುನೀರ್‌ ಅಹ್ಮದ್‌ ಶಾ ಅವರಿಗೆ ಫೋನ್‌ ಮಾಡಿದ ಧಸ್ಮಾನಾ, ‘ಅಭಿನಂದನ್‌ ಬಿಡುಗಡೆ ಮಾಡಿ. ಇಲ್ಲದಿದ್ದರೆ ಭಾರತ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ’ ಎಂದು ಗುಡುಗಿದರು.

ಈ ವೇಳೆ ಮೆತ್ತಗಾದ ಲೆ| ಜ| ಶಾ, ‘ಹೆಚ್ಚೂಕಮ್ಮಿ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಇಸ್ಲಾಮಾಬಾದ್‌ಗೂ ಗೊತ್ತು’ ಎಂದರು. ಇದರ ನಡುವೆಯೇ ಫೆ.28ರಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ‘ಶಾಂತಿಯ ಸಂಕೇತವಾಗಿ ಅಭಿನಂದನ್‌ ಬಿಡುಗಡೆ ಮಾಡುತ್ತೇವೆ’ ಎಂದು ಘೋಷಿಸಿದರು.