Asianet Suvarna News Asianet Suvarna News

ಸಂಸತ್ತಿಗೆ ಹೊಸ ಹೆಸರು ಘೋಷಣೆ ಸಾಧ್ಯತೆ: 3 ದ್ವಾರಗಳಿಗೆ ಜ್ಞಾನ, ಶಕ್ತಿ, ಕರ್ಮ ದ್ವಾರ ಎಂದು ನಾಮಕರಣ

ಮೇ 28ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಭವನ ಹಲವು ವಿಶೇಷತೆಗಳಿಗೆ, ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಇದುವರೆಗೂ ಸಂಸತ್‌ ಕಟ್ಟಡವನ್ನು ‘ಪಾರ್ಲಿಮೆಂಟ್‌ ಹೌಸ್‌’ ಎಂದು ಕರೆಯಲಾಗುತ್ತಿತ್ತು. 

A new name for Parliament is likely to be announced gvd
Author
First Published May 26, 2023, 7:15 AM IST

ನವದೆಹಲಿ (ಮೇ.26): ಮೇ 28ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಭವನ ಹಲವು ವಿಶೇಷತೆಗಳಿಗೆ, ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಇದುವರೆಗೂ ಸಂಸತ್‌ ಕಟ್ಟಡವನ್ನು ‘ಪಾರ್ಲಿಮೆಂಟ್‌ ಹೌಸ್‌’ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಸಾಹತುಶಾಹಿ ಮನಸ್ಥಿತಿಯನ್ನು ನೆನಪಿಸುವ ಹಲವು ಹೆಸರುಗಳನ್ನು ಬದಲಾಯಿಸಿದ್ದ ಕೇಂದ್ರ ಸರ್ಕಾರ, ಸಂಸತ್‌ ಭವನಕ್ಕೂ ಹೊಸ ಹೆಸರು ಇಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇದುವರೆಗೂ ಸಂಸತ್‌ ಭವನದ ದ್ವಾರಗಳನ್ನು ಸಂಖ್ಯೆಗಳ ಮೂಲಕ ಗುರುತಿಸಲಾಗುತ್ತಿತ್ತು. 

ಆದರೆ ಹೊಸ ಸಂಸತ್‌ ಭವನದ ಮೂರು ದ್ವಾರಗಳಿಗೆ ಜ್ಞಾನದ್ವಾರ, ಶಕ್ತಿದ್ವಾರ ಮತ್ತು ಕರ್ಮದ್ವಾರ ಎಂದು ಹೆಸರಿಡಲಾಗಿದೆ. ಇನ್ನು ಕಲಾಪದ ವೇಳೆ ವಿಪಕ್ಷಗಳ ಸದಸ್ಯರು ಸದನದ ಬಾವಿಗೆ ಧುಮುಕಿ ಅಧಿಕಾರಿಗಳ ಮೇಲೆ ಪೇಪರ್‌ ಎಸೆಯುವುದು, ಕಲಾಪದ ಚಿತ್ರೀಕರಣ ಮಾಡುವ ಕ್ಯಾಮೆರಾ ಕಣ್ಣಿಗೆ ಬೀಳಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಹೊಸ ಸಂಸತ್‌ ಭವನದಲ್ಲಿ ಇದು ಅಷ್ಟು ಸುಲಭವಲ್ಲ. ಕಾರಣ ಸದನದ ಬಾವಿಯು, ಮೊದಲ ಸಾಲಿನಲ್ಲಿ ಕುರ್ಚಿಗಿಂತ ಸಾಕಷ್ಟುಕೆಳಗಿದೆ. ಹೀಗಾಗಿ ಪ್ರತಿಭಟನಾ ನಿರತರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳುವುದು ಸಾಧ್ಯವಾಗದು. 

ನೂತನ ಸಂಸತ್‌ ಉದ್ಘಾಟನೆ ಬಹಿಷ್ಕಾರಕ್ಕೆ ಮೋದಿ ಕೆಂಗಣ್ಣು: ವಿಪಕ್ಷಗಳ ಹೆಸರೆತ್ತದೆ ಪ್ರಧಾನಿ ತರಾಟೆ

ಜೊತೆಗೆ ಪ್ರಿಸೈಂಡಿಗ್‌ ಆಫೀಸರ್‌ ಮತ್ತು ಸಭಾಧ್ಯಕ್ಷ ಪೀಠವು, ಹಳೆಯ ಕಟ್ಟಡಕ್ಕೆ ಹೋಲಿಸಿದರೆ ಸಾಕಷ್ಟುಎತ್ತರದಲ್ಲಿರಲಿದೆ. ಹೀಗಾಗಿ ಅವರ ಮೇಲೆ ಪೇಪರ್‌ ಎಸೆಯುವುದು ಕಷ್ಟವಾಗಲಿದೆ. ಜೊತೆಗೆ ಹೊಸ ಸಂಸತ್‌ ಭವನದ ಬಳಿಕ ಮಹಾತ್ಮಾ ಗಾಂಧೀಜಿ, ಭೀಮರಾವ್‌ ಅಂಬೇಡ್ಕರ್‌, ಸರ್ದಾರ್‌ ಪಟೇಲ್‌ ಮತ್ತು ಚಾಣಕ್ಯನ ಗ್ರಾನೈಟ್‌ ಪ್ರತಿಮೆಗಳನ್ನು ಅಳವಡಿಸಲಾಗುವುದು ಎನ್ನಲಾಗಿದೆ. ಹೊಸ ಸಂಸತ್‌ ಭವನ ಪೂರ್ಣ ಪ್ರಮಾಣದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದ ಮೇಲೆ ಹಳೆಯ ಸಂಸತ್‌ ಭವನವನ್ನು ಪ್ರಜಾಪ್ರಭುತ್ವದ ಮ್ಯೂಸಿಯಂ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಂಸತ್‌ ಉದ್ಘಾಟನೆಯ ಸಂಭಾವ್ಯ ವೇಳಾಪಟ್ಟಿ: ನೂತನ ಸಂಸತ್‌ ಭವನದ ಉದ್ಘಾಟನಾ ಕಾರ್ಯಕ್ರಮವು ಮೇ 28ರ ಭಾನುವಾರ ಎರಡು ಹಂತದಲ್ಲಿ ನಡೆಯಲಿದೆ. ಈ ಕುರಿತ ಸಂಭಾವ್ಯ ವೇಳಾಪಟ್ಟಿಮಾಧ್ಯಮಗಳಿಗೆ ಗುರುವಾರ ಲಭಿಸಿದೆ.

ಹಂತ 1
ಬೆಳಗ್ಗೆ: 7.30: ಸಂಸತ್ತಿನ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಹೋಮ. ಪ್ರಧಾನಿ, ಸ್ಪೀಕರ್‌ ಭಾಗಿ
8.30ರಿಂದ 9.30: ಲೋಕಸಭೆ ಸ್ಪೀಕರ್‌ ಪೀಠದ ಬಳಿ ಮೋದಿ ಅವರಿಂದ ಐತಿಹಾಸಿಕ ರಾಜದಂಡ ಪ್ರತಿಷ್ಠಾಪನೆ
9.30: ಧಾರ್ಮಿಕ ಮುಖಂಡರಿಂದ ಪ್ರಾರ್ಥನಾ ಸಭೆ: ಆದಿ ಶಂಕರಾಚಾರ್ಯರು, ಆದಿ ಶಿವನ ಪೂಜೆ

ಕರ್ನಾಟಕದ ಬಳಿಕ ತಮಿಳ್ನಾಡಲ್ಲಿ ಅಮುಲ್‌ ಕ್ಯಾತೆ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

ಹಂತ 2
ಮಧ್ಯಾಹ್ನ: 12.00: ಸಂಸತ್‌ ಭವನದ ಅಧಿಕೃತ ಉದ್ಘಾಟನೆ ಸಾಧ್ಯತೆ. ಹಳೆಯ ಮತ್ತು ಹೊಸ ಸಂಸತ್‌ ಭವನದ ಕುರಿತು 2 ಸಾಕ್ಷ್ಯಚಿತ್ರ ಪ್ರದರ್ಶನ. ಸ್ಮರಣಾರ್ಥ ನಾಣ್ಯ, ಅಂಚೆಚೀಟಿ ಬಿಡುಗಡೆ.
1.00: ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಸಂದೇಶ ವಾಚನ. ಸ್ಪೀಕರ್‌, ವಿಪಕ್ಷ ನಾಯಕರ ಭಾಷಣ
 2.30: ಪ್ರಧಾನಿ ನರೇಂದ್ರ ಮೋದಿ ಭಾಷಣ, ನಂತರ ಕಾರ್ಯಕ್ರಮ ಸಂಪನ್ನ

Follow Us:
Download App:
  • android
  • ios