ನವದೆಹಲಿ(ಜ.02): ಓರ್ವ ಹಿಂದೂ ಯಾವತ್ತೂ ರಾಷ್ಟ್ರ ವಿರೋಧಿಯಾಗಲಾರ, ಆತ ಯಾವತ್ತಿಗೂ ದೇಶಭಕ್ತನಾಗಿರುತ್ತಾನೆ. ದೇಶಭಕ್ತಿ ಹಿಂದೂಗಳ ಮೂಲಗುಣವಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇದೇ ವೇಳೆ ದೇಶಭಕ್ತಿ ಎಂಬುವುದು ತಮ್ಮ ಧರ್ಮದಿಂದಲೇ ಬಂದಿರುತ್ತದೆ ಎಂಬ ಮಹಾತ್ಮ ಗಾಂಧಿ  ಮಾತನ್ನೂ ಈ ಸಂದರ್ಭದಲ್ಲಿ ಭಾಗವತ್ ಉಲ್ಲೇಖಿಸಿದ್ದಾರೆ.

ಜೆಕೆ ಬಜಾಜ್ ಮತ್ತು ಎಂ.ಡಿ. ಶ್ರೀನಿವಾಸ್ ಅವರ 'ಮೇಕಿಂಗ್ ಆಫ್ ಹಿಂದೂ ಪ್ಯಾಟ್ರಿಯೋಟ್: ಬ್ಯಾಕ್ ಗ್ರೌಂಡ್ ಆಫ್ ಗಾಂಧೀಜಿಸ್ ಹಿಂದ್ ಸ್ವರಾಜ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ 'ತಮ್ಮ ಧರ್ಮ ಮತ್ತು ದೇಶಭಕ್ತಿಯು ತಮ್ಮಲ್ಲಿನ ಅಧ್ಯಾತ್ಮದಿಂದ ಉತ್ಪತ್ತಿಯಾಗುವ ತಾಯ್ನಾಡಿನ ಪ್ರೀತಿಗಿಂತ ಭಿನ್ನವಲ್ಲ. ವ್ಯಕ್ತಿಯ ದೇಶಭಕ್ತಿಯು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ ಇಲ್ಲಿ ಧರ್ಮ ಎಂದರೆ ಕೇವಲ ರಿಲಿಜಿಯನ್ ಅಲ್ಲ. ಅದಕ್ಕೂ ವಿಶಾಲವಾದ ಅರ್ಥ ಹೊಂದಿದೆ' ಎಂದಿದ್ದಾರೆ.

ಹಿಂದೂ ದೇಶವಿರೋಧಿಯಾಗಲಾರ

'ಒಬ್ಬ ವ್ಯಕ್ತಿ ಹಿಂದೂ ಆಗಿದ್ದರೆ, ಆತ ದೇಶಭಕ್ತನಾಗಿರಲೇಬೇಕು. ಅದು ಆತ/ಆಕೆಯ ಮೂಲ ಗುಣ ಮತ್ತು ಸ್ವಭಾವ. ಕೆಲವೊಂದು ಸಂದರ್ಭದಲ್ಲಿ ನೀವು ಆತನ ದೇಶಭಕ್ತಿ ಎಚ್ಚರಿಸಬೇಕಾಗುತ್ತದೆ. ಆದರೆ ಆತ ಎಂದಿಗೂ ಭಾರತ ವಿರೋಧಿಯಾಗಿರಲಾರ. ಆದರೆ ಒಬ್ಬ ವ್ಯಕ್ತಿ ತನ್ನ ದೇಶವನ್ನು ಪ್ರೀತಿಸುತ್ತಾನೆ ಎಂದರೆ ಅದು ಭೂಮಿ ಮಾತ್ರವಲ್ಲ, ಅದು ಜನರು, ನದಿಗಳು, ಸಂಸ್ಕೃತಿ, ಆಚರಣೆಗಳು ಮತ್ತು ಎಲ್ಲವೂ ಆಗಿರುತ್ತದೆ ಎಂಬ ವಾಸ್ತವದ ಬಗ್ಗೆಯೂ ತಿಳಿದಿರಬೇಕು' ಎಂದಿದ್ದಾರೆ.