ಅಯೋಧ್ಯೆ(ನ.13): ದೀಪಾವಳಿ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಆಯೋಜಿಸಲಾಗುವ ದೀಪೋತ್ಸವದಲ್ಲಿ ಭಾಗವಹಿಸಲು ತಲುಪಿದ ಸಿಎಂ ಯೋಗಿ ಆದಿತ್ಯನಾಥ್ ರಾಮ ಜನ್ಮಭೂಮಿ ತಲುಪಿ ರಾಮಲಲ್ಲಾನ ದರ್ಶನ ಪಡೆದು, ಮಂಗಳಾರತಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕೂಡಾ ಹಾಜರಿದ್ದರು. ಅಯೋಧ್ಯೆಯಲ್ಲು ಮೂರು ದಿನಗಳ ಕಾಲ ನಡೆಯುವ ದೀತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.

ಇಂದು, ಶುಕ್ರವಾರ ಸಂಜೆ ಅಯೋಧ್ಯೆಯ ರಾಮ್‌ ಕೀ ಪೈಡಿಯಲ್ಲಿ ದೀಪೋತ್ಸವ ನಡೆಯಲಿದೆ. ದಿವ್ಯ ದೀಪೋತ್ಸವದಲ್ಲಿ ಈ ಬಾರಿ ದೀಪಗಳ ಮಾಲೆಯ ಮೂಲಕ ರಾಮ ಹಾಗೂ ಹನುಮಂತನ ವಿವಿಧ ಸ್ವರೂಪದ ದರ್ಶನವಾಗಲಿದೆ.

ಈ ಆಯೋಜನೆಗೆ ಡಾ. ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾನಿಲಯದ ಸ್ವಯಂಸೇವಕರು ದೀಪಗಳನ್ನು ನಿರ್ದಿಷ್ಟ ಸ್ವರೂಪದಲ್ಲಿ ಗುರುವಾರದಂದು ಇರಿಸಿದ್ದಾರೆ. ಈ ದೀಪಗಳು ಇಂದು ಸಂಜೆ ಐದು ಗಂಟೆಗೆ ಬೆಳಗಲಿವೆ. 

ಭಾರೀ ದೊಡ್ಡ ಪ್ರಮಾಣದಲ್ಲಿ ದೀಪಾವಳಿ ಅಯೋಜನೆ ಆಗಿದ್ದು, ಅಯೋಧ್ಯೆಯಲ್ಲಿ 5.51 ಲಕ್ಷ ದೀಪಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ. ಬೆಳಕಿನ ಹಬ್ಬದ ಸಂದರ್ಭದಲ್ಲಿ ರಾಮ್‌ ಕೀ ಪೈಡಿ ಘಾಟ್‌ಗಳಲ್ಲಿ 5.51 ಲಕ್ಷ ದೀಪಗಳನ್ನು ಪ್ರಜ್ವಲಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದು, ಇದರ ಅನ್ವಯ ಈ ಬಾರಿ ದೀಪಗಳು ಬೆಳಗಲಿವೆ.