Asianet Suvarna News Asianet Suvarna News

ಬಣ್ಣ ಬಣ್ಣದ ಹೂಕೋಸು ಬೆಳೆದು ಬದುಕ ಹೂವಾಗಿಸಿದ ರೈತ

ಇಲ್ಲೊಬ್ಬ ರೈತರು ಬಣ್ಣ ಬಣ್ಣದ ಕ್ಯಾಲಿಫ್ಲವರ್ ಅಥವಾ ಹೂಕೋಸು ಬೆಳೆದು ಬದುಕನ್ನು ಬಣ್ಣವಾಗಿಸಿಕೊಂಡಿದ್ದಾರೆ. ಅವರೇ 62 ವರ್ಷ ಪ್ರಾಯದ ರೈತ ಪ್ರಮಥಾ ಮಜಿ.  

A farmer from west bengal made his life colourful by cultivating multi colored cauliflower akb
Author
First Published Jan 29, 2023, 4:29 PM IST

ಕೋಲ್ಕತ್ತಾ:  ಕೃಷಿ ಎಂಬುದು ಕಠಿಣ ಪರಿಶ್ರಮ ಬಯಸುವ ಕ್ಷೇತ್ರ.  ಜೊತೆಗೆ ಕನಿಷ್ಠ ಲಾಭ ಬಹುತೇಕ ಸಮಯದಲ್ಲಿ ಬರೀ ನಷ್ಟವೇ ಇಲ್ಲಿ ಕಾಣಿಸುತ್ತದೆ.  ಅನೇಕ ರೈತರು ಕೃಷಿ ಕ್ಷೇತ್ರದಲ್ಲಿ ಹೊಸತನ ಮಾಡಲು ಹೋಗಿ ಕೈ ಸುಟ್ಟು ಕೊಂಡಿದ್ದಾರೆ. ಆದಾಗ್ಯೂ ಕೆಲವು ರೈತರು ಹಲವು ಬಾರಿಯ ನಷ್ಟದ ನಡುವೆಯೂ ಸಾಲವೋ ಸೋಲವೋ ಹಠ ಬಿಡದೇ ಕೃಷಿಯಲ್ಲಿ ಹೊಸತನ ತಂದು ಯಶಸ್ಸು ಕಂಡ ಅನೇಕ ರೈತರು ನಮ್ಮ ಮಧ್ಯೆ ಇದ್ದಾರೆ. ಹಾಗೆಯೇ ಇಲ್ಲೊಬ್ಬ ರೈತರು ಬಣ್ಣ ಬಣ್ಣದ ಕ್ಯಾಲಿಫ್ಲವರ್ ಅಥವಾ ಹೂಕೋಸು ಬೆಳೆದು ಬದುಕನ್ನು ಬಣ್ಣವಾಗಿಸಿಕೊಂಡಿದ್ದಾರೆ. ಅವರೇ 62 ವರ್ಷ ಪ್ರಾಯದ ರೈತ ಪ್ರಮಥಾ ಮಜಿ.  

ಅಂದಹಾಗೆ ಇವರು ಪಶ್ಚಿಮ ಬಂಗಾಳದ ರೈತ. ಪೂರ್ವ ಮಿಡ್ನಾಪುರ ಜಿಲ್ಲೆಯ ಕೋಲಘಾಟ್‌ನ (Kolaghat) ಬ್ರಿಂದಾವನ್ ಛಕ್ ಗ್ರಾಮದ (Brindaban Chak) ನಿವಾಸಿಯಾಗಿರುವ ಇವರಿಗೆ ಸುಮಾರು ಮೂರುವರೆ ಎಕರೆ ಫಲವತ್ತಾದ ಜಮೀನಿದ್ದು, ಅದರಲ್ಲೀಗ ಬಣ್ಣ ಬಣ್ಣದ ಹೂಕೋಸು (cauliflowers) ಬೆಳೆಸಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಇವರ ಹೊಲದಲ್ಲಿ ಕೇಸರಿ ಹಸಿರು ಹಾಗೂ ನೆರಳೆ ಬಣ್ಣದ ಹೂಕೋಸುಗಳಿವೆ.  ಆನ್ಲೈನ್ ಮಾರುಕಟ್ಟೆಯಲ್ಲಿ ಹೂಕೋಸು ಬೀಜ ಖರೀದಿಸಿದ ಇವರು ದೊಡ್ಡ ಮಟ್ಟದಲ್ಲಿ ವಿವಿಧ ಬಣ್ಣಗಳ ಹೂಕೋಸಿನ ಬೆಳೆ ಬೆಳೆಯಲು ಶುರು ಮಾಡಿದರು. 

ಕಳೆದ ವರ್ಷ ಆಗಸ್ಟ್ ಅಂತ್ಯದ ವೇಳೆಗೆ ವಾಲೆಂಟಿನಾ ಹಾಗೂ ಕೆರೋಟಿನಾ ಜಾತಿಯ ಹೂಕೋಸು ಬೀಜಗಳನ್ನು ಅವರು ಬಿತ್ತನೆ ಮಾಡಿದರು.  ಇದು ಬೆಳೆದು ಕೈಗೆ ಫಸಲು ನೀಡುವುದಕ್ಕೆ 75ರಿಂದ 85 ದಿನ ಹಿಡಿಯಿತು. 2013ರಿಂದಲೂ ನಾವು ಹೀಗೆ ವಿವಿಧ ಹೈಬ್ರೀಡ್ ಬೆಳೆಗಳ ತರಕಾರಿಯ ಬೆಳೆಯುವ ಪ್ರಯೋಗ ಮಾಡುತ್ತಿದ್ದೇವೆ.  ಇದೇ ಸಮಯದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯೂ ರೈತರಿಗಾಗಿ ಹಲವು ಕಾರ್ಯಾಗಾರ ಹಾಗೂ ರೈತರ ಹಾಗೂ ಬೀಜ ಉತ್ಪಾದಕರ ಮಧ್ಯೆ ಸಂವಹನವನ್ನು ಆಯೋಜಿಸಿತ್ತು ಎನ್ನುತ್ತಾರೆ ಮಜಿ.

ಈ ಹೈಬ್ರೀಡ್ ಹೂಕೋಸುಗಳು, ಕ್ರೂಸಿಫೇರಸ್ (cruciferous) ಅಥವಾ ಕ್ಯಾಬೇಜ್ ಕುಟುಂಬಕ್ಕೆ ಸೇರಿದ್ದಾಗಿದೆ. ವ್ಯಾಲೇಂಟಿನ (ನೆರಳೆ ಬಣ್ಣ) ಕ್ಯಾರೋಟಿನಾ (ಕೇಸರಿ ಬಣ್ಣ) ಹಾಗೂ ಬ್ರುಕೋಲಿ ಎಂದು ಪ್ರಸಿದ್ಧವಾಗಿರುವ ಹಸಿರು ಬಣ್ಣದ ಈ ತಳಿಗಳನ್ನು ಸಸ್ಯ ತಳಿ ಅಭಿವೃದ್ಧಿಪಡಿಸುವವರು ನೈಸರ್ಗಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಎಂದು ಮಜಿ ಹೇಳಿದರು.

ಇವುಗಳ ಬಣ್ಣ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಬಹಳವಾಗಿ ಸೆಳೆಯುತ್ತಿದೆ. ಅಲ್ಲದೇ ಗ್ರಾಹಕರು ಕುತೂಹಲದಿಂದ ಈ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಪ್ರಾರಂಭದಲ್ಲಿ ಇದನ್ನು ಮಾರಾಟ ಮಾಡಲು ನಮಗೆ ಬಹಳ ಕಷ್ಟವಾಯ್ತು ಎಂದು ಹೇಳುತ್ತಾರೆ ವ್ಯಾಪಾರಿ ಗೋವಿಂದ್ ದೇವ್,  ಭವಾನಿಪುರದ ಜಡ್ಡುಬಾಬು ಬಜಾರ್‌ನಲ್ಲಿ ಕಳೆದ 45 ವರ್ಷಗಳಿಂದ ತರಕಾರಿ ಮಾರಾಟ ಮಾಡುವ ಇವರು ಚಿಲ್ಲರೆಯಾಗಿ 50 ರಿಂದ 60 ರೂಪಾಯಿಗೆ ಈ ಹೂಕೋಸುಗಳು ಮಾರಾಟವಾಗುತ್ತಿವೆ ಎಂದು ಹೇಳಿದರು. 

ಈ ಹೂಕೋಸುಗಳು ಹೇರಳವಾಗು ಪೋಷಕಾಂಶವನ್ನು ಹೊಂದಿರುವುದರಿಂದ ಕಣ್ಣು ಹಾಗೂ ಹೃದಯದ ಆರೋಗ್ಯಕ್ಕೆ ಉಪಕಾರಿಯಾಗಿದೆ. ಅದರಲ್ಲು ನೇರಳೆ ಬಣ್ಣದ ವ್ಯಾಲೇಂಟಿನಾದಲ್ಲಿ ಅಂಥೋಸಿನಿನ್ ಎಂಬ ಪೋಷಕಾಂಶ ಹೇರಳವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಜ್ಞರು ಹೇಳುತ್ತಾರೆ. 2014ರಲ್ಲಿ ಹೀಗೆ ಮಿಶ್ರ ಬಣ್ಣಗಳ ಹೂಕೋಸು ಬೆಳೆಯಲು ಆರಂಭಿಸಿದ ಇವರಿಗೆ ಇತ್ತೀಚಿನ ಮಾರುಕಟ್ಟೆಯಲ್ಲಿ ಒಳ್ಳೆ ಬೇಡಿಕೆ ಇದೆಯಂತೆ. 

ಈ ವರ್ಷ ಸುಮಾರು ಅಂದಾಜು 8 ಸಾವಿರ ಹಸಿರು ಬಣ್ಣದ ಬ್ರುಕೋಲಿ ಬೆಳೆ ಹಾಕಿದ್ದ ಇವರು ಅಷ್ಟನ್ನೂ ಕೂಡ ಚಳಿಗಾಲದ ಸಮಯದಲ್ಲಿ ಕೊಯ್ಲು ಮಾಡಿ ಮಾರುಕಟ್ಟೆಗೆ ತಲುಪಿಸಿದ್ದಾರೆ. ಮೊದಲ ಬಾರಿಗೆ ನಾನು ಪ್ರಯೋಗಾರ್ಥವಾಗಿ ಈ ಬೆಳೆಯನ್ನು ಸಣ್ಣ ಮಟ್ಟಿನಲ್ಲಿ ಬೆಳೆದೆ ಆದರೆ ಅದು ದೊಡ್ಡ ಮಟ್ಟದಲ್ಲೇ ಯಶಸ್ಸು ನೀಡಿತು ಎಂದು ಅವರು ಹೇಳುತ್ತಾರೆ. ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಕೆಲವೊಮ್ಮೆ ಮಳೆ ಹೆಚ್ಚಾಗಿ ಮತ್ತೆ ಕೆಲವೊಮ್ಮೆ ಮಳೆ ಕಡಿಮೆಯಾಗಿ ಸದಾ ನಷ್ಟದಿಂದ ಸಂಕಷ್ಟಕ್ಕೀಡಾಗುವ ರೈತ ಸಮುದಾಯವರೊಬ್ಬರು ಹೀಗೆ ವಿಭಿನ್ನ ಪ್ರಯೋಗ ಮಾಡಿ ಲಾಭ ಗಳಿಸುತ್ತಿರುವುದು ರೈತ ಸಮುದಾಯದ ಎಲ್ಲರೂ ಖುಷಿ ಪಡುವ ವಿಚಾರ. ಅನ್ನದಾತೋ ಸುಖಿಭವ..!

Follow Us:
Download App:
  • android
  • ios