ಕಾರ್ಮಿಕರಿಗೆ ಆಹಾರ ತಯಾರಿಸಿದ 99 ವರ್ಷದ ಅಜ್ಜಿ; ಹೃದಯಸ್ಪರ್ಶಿ ಘಟನೆ ವೈರಲ್!
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಪ್ರತಿ ದಿನ ವಲಸೆ ಕಾರ್ಮಿಕರ ಮನಕಲುವ ಘಟನೆಗಳು ವರದಿಯಾಗುತ್ತಿದೆ. ಹಲವು ಸಂಘ ಸಂಸ್ಥೆಗಳು, ದಾನಿಗಳು ವಲಸೆ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ಇದೀಗ 99 ವರ್ಷದ ಅಜ್ಜಿಯೊಬ್ಬರು ವಲಸೆ ಕಾರ್ಮಿಕರಿಗೆ ಆಹಾರ ತಯಾರಿಸುತ್ತಿರುವ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ.
ಮುಂಬೈ(ಮೇ.30): ಹೊಟ್ಟೆ ಪಾಡಿಗಾಗಿ ಹಳ್ಳಿಯಿಂದ ಪಟ್ಟಣ, ನಗರ ಸೇರಿಕೊಂಡು ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ತ ದುಡಿಮೆ ಇಲ್ಲ, ಕೈಯಲ್ಲಿ ದುಡ್ಡಿಲ್ಲ, ತಿನ್ನಲ್ಲು ಆಹಾರವಿಲ್ಲ, ಊರಿಗೆ ತೆರಳು ಸಾರಿಗೆ ಇಲ್ಲ, ಇದರೊಂದಿಗೆ ಪುಟ್ಟ ಮಕ್ಕಳು, ಮಹಿಳೆಯರು ಸ್ಥಿತಿ ಯಾರಿಗೂ ಬೇಡ. ಹೀಗೆ ಸಂಕಷ್ಟದಲ್ಲಿ ಸಿಲುಕಿದ ಮುಂಬೈ ವಲಸೆ ಕಾರ್ಮಿಕರಿಗೆ 99 ವರ್ಷದ ಅಜ್ಜಿ ಆಹಾರ ತಯಾರಿಸುತ್ತಿರುವ ಹೃದಯಸ್ಪರ್ಶಿ ಘಟನೆ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ.
ಝಾಹಿದ್ ಎಫ್ ಇಬ್ರಾಹಿಂ ಟ್ವಿಟರ್ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನನ್ನ 99 ವರ್ಷದ ಅಜ್ಜಿ ಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೇಟ್ ತಯಾರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ರೋಟಿ, ಚಟ್ನಿ ಮೂಲಕ ಆಹಾರ ಪೊಟ್ಟಣ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಳ್ಮೆಯಿಂದ ನಿಧಾನವಾಗಿ ಅಜ್ಜಿ ಪ್ಯಾಕೇಟ್ ರೆಡ ಮಾಡುತ್ತಿದ್ದಾರೆ. ಮುಂಬೈನಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಇದರಿಂದ ಲಕ್ಷ ಲಕ್ಷ ವಲಸೆ ಕಾರ್ಮಿಕರು ಪ್ರತಿ ದಿನ ಆಹಾರವಿಲ್ಲದೆ ನರಳುತ್ತಿದ್ದಾರೆ.