98 ವರ್ಷದ ಅಜ್ಜಿಯಿಂದ ಬಡವರಿಗಾಗಿ ಮಾಸ್ಕ್ ತಯಾರಿಕೆ, ಎಲ್ಲರಿಗೂ ಮಾದರಿ!
ಕೊರೋನಾ ವೈರಸ್ ಮಹಾಮಾರಿ ತೊಲಗಿಸಲು ಪ್ರತಿಯೊಬ್ಬರ ಕಾಣಿಕೆ ಮುಖ್ಯ. ಮನೆಯಿಂದ ಹೊರಬರದಿದ್ದರೆ ಅಷ್ಟೇ ಸಾಕು. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಹಲವರು ನೆರವು ನೀಡುತ್ತಿದ್ದಾರೆ. ಇದೀಗ 98 ವರ್ಷದ ಅಜ್ಜಿಯೊಬ್ಬರು ಒಂದು ಕಣ್ಣು ಕಾಣಿಸದಿದ್ದರೂ ಪ್ರತಿ ದಿನ ಮಾಸ್ಕ್ ತಯಾರಿಸಿ ಬಡವರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಅಜ್ಜಿಯ ಮಾದರಿ ಕೆಲಸದ ಹೆಚ್ಚಿನ ಮಾಹಿತಿ ಇಲ್ಲಿದೆ.
ಮೊಗಾ(ಏ.20): ಲಾಕ್‌ಡೌನ್, ಕೆಲಸವಿಲ್ಲ, ಒಂದು ಹೊತ್ತಿನ ಆಹಾರವೇ ಖರೀದಿ ಅಥವಾ ಸೇವನೆ ಕಷ್ಟವಾಗುತ್ತಿದೆ.. ಹೀಗಿರುವಾಗ ನಿರ್ಗತಿಕರು, ಬಡವರು ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಖರೀದಿ ಸಾಧ್ಯವೆ. ಈಗಾಗಲೇ ಹಲವರು ಮಾಸ್ಕ್, ಆಹಾರ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಜ್ಜಿಯ ಪ್ರಯತ್ನ ವಿಶೇಷವಾಗಿದೆ. ಜೊತೆಗೆ ಎಲ್ಲರಿಗೂ ಮಾದರಿಯಾಗಿದೆ.
'ಕೊರೋನಾ ಜಾತಿ, ಧರ್ಮ ನೋಡಲ್ಲ: ಇದರ ವಿರುದ್ಧ ಹೋರಾಡಲು ಏಕತೆ, ಭ್ರಾತೃತ್ವ ಬೇಕು'...
ಪಂಜಾಬ್‌ನ ಮೊಗಾ ಜಿಲ್ಲೆಯ ನಿವಾಸಿಯಾಗಿರುವ 98 ವರ್ಷದ ಗುರುದೇವ್ ಕೌರ್ ದಲೀವಾಲ್ ಕಾರ್ಯ ನಿಜಕ್ಕೂ ಮೆಚ್ಚಲೇ ಬೇಕು. 98 ವರ್ಷದ ಗುರುದೇವ್ ಕೌರ್‌ಗೆ ಯಾರ ಸಹಾಯವಿಲ್ಲದೆ ಏಳಲು ಸಾಧ್ಯವಿಲ್ಲ, ಇತ್ತ ಒಂದು ಕಣ್ಣು ಕಾಣಿಸುತ್ತಿಲ್ಲ. ಆದರೂ ಪ್ರತಿ ದಿನ ಬೆಳಗ್ಗೆ ಎದ್ದು ಪೂಜೆ ಮುಗಿಸಿ ಮಾಸ್ಕ್ ಹೊಲಿಯುತ್ತಿದ್ದಾರೆ. ಸಿಂಗಾಪುರದಿಂದ ಸಂಬಂಧಿಕರು 100 ವರ್ಷಗಳ ಹಿಂದೆ ಹೊಲಿಗೆ ಯಂತ್ರ ತಂದುಕೊಟ್ಟಿದ್ದರು. ಈ ಯಂತ್ರದಲ್ಲಿ ಗುರುದೇವ್ ಕೌರ್ ಮಾಸ್ಕ್ ಹೊಲಿದು ಬಡವರಿಗೆ ಹಂಚುತ್ತಿದ್ದಾರೆ.
ಗುರುದೇವ್ ಗೌರ್ ನೆರೆ ಮನೆಯವರು ಬಟ್ಟೆಗಳನ್ನು ತಂದುಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮಾಸ್ಕ್‌ಗಳನ್ನು ವಿತರಿಸಲು ಸಹಾಯ ಮಾಡುತ್ತಿದ್ದಾರೆ. ಕೌರ್ ಹೊಲಿದ ಮಾಸ್ಕ್‌ಗಳನ್ನು ನಿವಾಸಿಗಳೆಲ್ಲಾ ಬಳಸುತ್ತಿದ್ದಾರೆ. ಬಡವರು ಕೌರ್ ಮನೆ ಬಳಿ ಉಚಿತ ಮಾಸ್ಕ್ ಪಡೆದುಕೊಂಡು ಹೋಗುತ್ತಿದ್ದಾರೆ. ಮಾಸ್ಕ್ ಮುಗಿದಿದ್ದರೂ ಮನೆ ಬಳಿ ಬಂದರೆ ತಕ್ಷಣವೆ ಹೊಲಿದು ಮಾಸ್ಕ್ ವಿತರಿಸುತ್ತಿದ್ದಾರೆ. ಇದೀಗ ಈ ಅಜ್ಜಿಯ ಕಾರ್ಯ ಎಲ್ಲರಿಗೂ ಸ್ಪೂರ್ತಿಯಾಗಿದೆ.