ನವದೆಹಲಿ[ಜ.16]: ಪ್ರಧಾನಿ ನರೇಂದ್ರ ಮೋದಿ ಅವರ ಕೇವಲ ಐದು ವರ್ಷಗಳ ಆಡಳಿತಾವಧಿಯಲ್ಲಿ ನೂತನವಾಗಿ 90 ಸರ್ಕಾರಿ ವೈದ್ಯಕೀಯ ಕಾಲೇಜುಗಳು ದೇಶಾದ್ಯಂತ ತಲೆ ಎತ್ತಿವೆ. ಈ ಮೂಲಕ ಸರ್ಕಾರದ ದಾಖಲೆಗಳ ಪ್ರಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗಿಂತಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೇ ಹೆಚ್ಚಿದಂತಾಗಿದೆ.

2019-20ನೇ ಸಾಲಿನಲ್ಲಿ ದೇಶಾದ್ಯಂತ 260 ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 279ಕ್ಕೆ ಏರಿದೆ. 2014-15ರ ಅವಧಿಯಲ್ಲಿ 189 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ 215 ಖಾಸಗಿ ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, 2014-19ರ ಅವಧಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಶೇ.47ರಷ್ಟು ಏರಿಕೆಯಾಗಿವೆ. ಈ ಮೂಲಕ 2014-15ರಲ್ಲಿ 404 ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 2019ರಲ್ಲಿ 539ಕ್ಕೆ ಜಿಗಿದಿದೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕೀಯ ಮಂಡಳಿಯ ಮಂಡಳಿ ಅಧ್ಯಕ್ಷ ಡಾ.ವಿ.ಕೆ ಪೌಲ್‌ ಅವರು, ‘ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತನೆ ಸೇರಿದಂತೆ ಇನ್ನಿತರ ಕ್ರಮಗಳಿಂದಾಗಿ ಇಂದು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಏರಿಕೆಯಾಗಿವೆ. ಅಲ್ಲದೆ, ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗುವ ರಾಜ್ಯಗಳಿಗೂ ನೆರವು ನೀಡಲಾಗಿದ್ದರಿಂದ ಈ ಬೆಳವಣಿಗೆಯಾಗಿದೆ’ ಎಂದು ಹೇಳಿದರು.