* ಸರ್ಕಾರದ ಮಟ್ಟದಲ್ಲಿ ತಜ್ಞರ ಚಿಂತನೆ* ಬೂಸ್ಟರ್‌ ಡೋಸ್‌ ನಡುವೆ 9-12 ತಿಂಗಳ ಅಂತರ* ಈ ಮೊದಲು ಪಡೆದ ಲಸಿಕೆಯೇ ಬೂಸ್ಟರ್‌ ಆಗಿ ನೀಡಿಕೆ* ಮಕ್ಕಳಿಗೂ ಸದ್ಯಕ್ಕೆ ಝೈಡಸ್‌ ಬದಲಿಗೆ ಕೋವ್ಯಾಕ್ಸಿನ್‌ ಲಸಿಕೆ ಮಾತ್ರವೇ ನೀಡುವ ಬಗ್ಗೆ ಒಲವು 

ನವದೆಹಲಿ(ಡಿ.27): 60 ವರ್ಷ ಮೇಲ್ಪಟ್ಟಪೂರ್ವರೋಗ ಪೀಡಿತರು ಹಾಗೂ ವೈದ್ಯರಂಥ ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ (ಬೂಸ್ಟರ್‌ ಡೋಸ್‌) ಲಸಿಕೆ ವಿತರಣೆಯನ್ನು ಜ.10ರಿಂದ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ, ಲಸಿಕೆಯ ಅಂತರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ.

2ನೇ ಡೋಸ್‌ ಪಡೆದ 9ರಿಂದ 12 ತಿಂಗಳಲ್ಲಿ ಬೂಸ್ಟರ್‌ ಡೋಸ್‌ ಪಡೆಯಬೇಕು ಎಂದು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಲಸಿಕಾಕರಣ ತಾಂತ್ರಿಕ ಸಲಹಾ ಸಮಿತಿ’ (ಎನ್‌ಟಿಎಜಿಐ) ತಜ್ಞರು ಗಂಭೀರ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಶೀಘ್ರ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

ಬೂಸ್ಟರ್‌ ಲಸಿಕೆ?:

ಜ.10ರಿಂದ ಆರಂಭವಾಗಲಿರುವ ಬೂಸ್ಟರ್‌ ಡೋಸ್‌ ನೀಡಿಕೆ ವೇಳೆ ಈಗಾಗಲೇ ಭಾರತದಲ್ಲಿ ಹೆಚ್ಚಾಗಿ ನೀಡಿರುವ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಬದಲಿಗೆ ಎಂಆರ್‌ಎನ್‌ಎ ತಂತ್ರಜ್ಞಾನ ಆಧರಿತ ಲಸಿಕೆ ನೀಡುವುದು ಸೂಕ್ತ ಎಂದು ಹಲವು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಇದಕ್ಕಾಗಿ ಬೇರೆ ಲಸಿಕೆಗಳ ಮೊರೆ ಹೋಗುವ ಬದಲು ಈಗಾಗಲೇ ವಿಶ್ವಾಸಾರ್ಹತೆ ಪಡೆದುಕೊಂಡಿರುವ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆಯನ್ನೇ ಬೂಸ್ಟರ್‌ ಡೋಸ್‌ ಆಗಿ ನೀಡಲು ಸರ್ಕಾರ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಮಕ್ಕಳಿಗೆ ಕೋವ್ಯಾಕ್ಸಿನ್‌:

ಇನ್ನು 2022ರ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ, ಲಸಿಕೆಯಾಗಿ ಸದ್ಯಕ್ಕೆ ಕೋವ್ಯಾಕ್ಸಿನ್‌ ಅನ್ನು ಮಾತ್ರವೇ ಬಳಸಲು ಉದ್ದೇಶಿಸಿದೆ ಎನ್ನಲಾಗಿದೆ. ಝೈಡಸ್‌ ಕ್ಯಾಡಿಲಾದ ಲಸಿಕೆ ಅನುಮೋದನೆ ಪಡೆದುಕೊಂಡಿದ್ದರೂ, ಅದನ್ನು ಇನ್ನೂ ಹಿರಿಯರ ಮೇಲೇ ಪ್ರಯೋಗ ಮಾಡಿಲ್ಲ. ಹೀಗಾಗಿ ಏಕಾಏಕಿ ಮಕ್ಕಳ ಮೇಲೆ ಪ್ರಯೋಗ ಮಾಡುವ ಬಗ್ಗೆ ತಜ್ಞರು ಅಷ್ಟುಉತ್ಸಾಹ ತೋರಿಲ್ಲ. ಅದರ ಬದಲು ಈಗಾಗಲೇ ಹಿರಿಯರಲ್ಲಿ ಯಾವುದೇ ಅಡ್ಡಪರಿಣಾಮಗಳಿಗೆ ಕಾರಣವಾಗದ ಕೋವ್ಯಾಕ್ಸಿನ್‌ ಮೇಲೇ ತಜ್ಞರು ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ವಿತರಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.