ನವದೆಹಲಿ[ಮಾ.07]: ಕಳೆದೊಂದು ತಿಂಗಳಿನಿಂದ ಕೊರೋನಾ ವೈರಸ್ ಭಯಕ್ಕೆ ಮತ್ತೊಂದು ಹೆಸರಾಗಿ ಮಾರ್ಪಾಡಾಗಿದೆ. ಇಡೀ ವಿಶ್ವವನ್ನೇ ಈ ಮಾರಕ ವೈರಸ್ ಆತಂಕಕ್ಕೀಡು ಮಾಡಿದೆ. ವಿಜ್ಞಾನಿಗಳು ಈ ವೈರಸ್ ಗೆ ಔಷಧಿ ಹುಡುಕುತ್ತಿದ್ದಾರೆ. ಈವರೆಗೂ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದ್ದರೆ, 90 ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಚೀನಾದಿಂದ ಹರಡಿದ ಈ ಫೋಟೋ ಇರಾನ್, ಅಮೆರಿಕಾ, ಪಾಕಿಸ್ತಾನ ಹಾಗೂ ಭಾರತ ಸೇರಿದಂತೆ ಜತ್ತಿನ 70ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಹೀಗಿರುವಾಗ ವುಹಾನ್ ನ ಆಸ್ಪತ್ರೆ ಹೊರ ಭಾಗದ ಫೋಟೋ ಒಂದು ವೈರಲ್ ಆಗಿದ್ದು, ಇದು ಚೀನಿಯರಲ್ಲಿ ಭರವಸೆಯ ಬೆಳಕು ಮೂಡಿಸಿದೆ.

ಹೌದು ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ವುಹಾನ್ ಆಸ್ಪತ್ರೆ ಆವರಣದಲ್ಲಿ ವೈದ್ಯರೊಬ್ಬರು COVID-19 ನಿಂದ ಪೀಡಿತ ರೋಗಿಯೊಂದಿಗೆ ಸೂರ್ಯ ಮುಳುಗುತ್ತಿರುವುದನ್ನು ನೋಡುವ ದೃಶ್ಯವಿದೆ. ನೆನಪಿರಲಿ ಚೀನಾದ ವುಹಾನ್ ನಗರದಿಂದಲೇ ಕೊರೋನಾ ವೈರಸ್ ಮೊಟ್ಟ ಮೊದಲು ಹರಡಿತ್ತು.

ಈ ಫೋಟೋವನ್ನು Chenchen Zhang ಹೆಸರಿನ ಟ್ವಿಟರ್ ಬಳಕೆದಾರ ಶೇರ್ ಮಾಡಿದ್ದಾರೆ. ಫೋಟೋ ಜೊತೆ 'ವುಹಾನ್ UNI ಆಸ್ಪತ್ರೆಯಲ್ಲಿ, ಶಾಂಘೈನ ಸುಮಾರು 20 ವರ್ಷದ ಡಾಕ್ಟರ್ 87 ವರ್ಷದ ರೋಗಿಯನ್ನು ಸಿಟಿ ಸ್ಕ್ಯಾನ್ ಗಾಗಿ ತೆರಳುತ್ತಿದ್ದರು. ಈ ರೋಗಿ ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ. ಹೀಗಿರುವಾಗ ರೋಗಿ, ವೈದ್ಯರ ಬಳಿ ಮುಳುಗುತ್ತಿರುವ ಸೂರ್ಯನನ್ನು ನೋಡಬೇಕೆನ್ನುತ್ತಾನೆ. ಡಾಕ್ಟರ್ ಮರು ಮಾತನಾಡದೇ ನಿಲ್ಲುತ್ತಾರೆ. ಬಳಿಕ ಇಬ್ಬರೂ ಈ ಕ್ಷಣವನ್ನು ಒಟ್ಟಾಗಿ ಆಸ್ವಾದಿಸುತ್ತಾರೆ' ಎಂದು ಬರೆದಿದ್ದಾರೆ. 

ಬನ್ನಿ ಮನುಷ್ಯರಾಗೋಣ...!

ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದ್ದು, ಭಿನ್ನ ವಿಭಿನ್ನ ಕಮೆಂಟ್ ಗಳು ಬಂದಿವೆ. 

ವೈರಸ್ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ

ಮಾನವೀಯತೆ ಇನ್ನೂ ಉಳಿದಿದೆ


ಇದು ಅತ್ಯಂತ ಸುಂದರ ಚಿತ್ರ!


ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದರೂ, ಫೋಟೋ ಭರವಸೆಯ ಬೆಳಕಾಗಿ ಮಾರ್ಪಾಡಾಗಿದೆ. ಮಾನವೀಯತೆಯನ್ನು ಎತ್ತಿ ಹಿಡಿದಿರುವ ಈ ಫೋಟೋ ಈ ಕೆಟ್ಟ ಕ್ಷಣ ಕಳೆಯುತ್ತದೆ ಎಂಬ ವಿಶ್ವಾಸ ಮೂಡಿಸಿದೆ.