ನವದೆಹಲಿ(ಮೇ13): ದೇಶದಲ್ಲೇ ಕೊರೋನಾ ಲಸಿಕೆಯ ಅಭಾವವಿರುವಾಗ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ ಭಾರತದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿ ಇನ್ನಿತರ ವಿಪಕ್ಷಗಳು ಟೀಕಾಸ್ತ್ರ ನಡೆಸುತ್ತಿರುವ ನಡುವೆಯೇ, ವಿದೇಶಗಳಿಗೆ ರಫ್ತು ಮಾಡಲಾದ ಶೇ.85ರಷ್ಟುಲಸಿಕೆಯ ಡೋಸ್‌ಗಳು ಭಾರತದಲ್ಲಿ ಲಸಿಕೆ ಉತ್ಪಾದಿಸುತ್ತಿರುವ 2 ಕಂಪನಿಗಳ ವಾಣಿಜ್ಯ ಮತ್ತು ಪರವಾನಗಿ ಬಾಧ್ಯತೆಗಳ ಭಾಗವಾಗಿದೆ ಎಂದು ವಿಪಕ್ಷಗಳ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ.

ಈ ಸಂಬಂಧ ಬುಧವಾರ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ಭಾರತವು ವಿವಿಧ ರಾಷ್ಟ್ರಗಳಿಗೆ ಒಟ್ಟಾರೆ 1.07 ಕೋಟಿ ಡೋಸ್‌ಗಳನ್ನು ನೆರವಿನ ರೂಪದಲ್ಲಿ ರಫ್ತು ಮಾಡಿದೆ. ಇದರಲ್ಲಿ 78.5 ಲಕ್ಷ ಡೋಸ್‌ಗಳು ನೆರೆಯ 7 ರಾಷ್ಟ್ರಗಳಿಗೆ ಪೂರೈಸಲಾಗಿದೆ. ಭಾರತದ ಸುರಕ್ಷತೆ ನಿಟ್ಟಿನಲ್ಲಿ ನೆರೆಯ ರಾಷ್ಟ್ರಗಳು ಸುರಕ್ಷಿತವಾಗಿರುವುದು ಉತ್ತಮ’ ಎಂದು ರಾಹುಲ್‌ ಗಾಂಧಿ ಮತ್ತು ಆಪ್‌ ವಿರುದ್ಧ ವಾಗ್ದಾಳಿ ನಡೆಸಿದರು. ಉಳಿದಂತೆ 5.5 ಕೋಟಿ ಡೋಸ್‌ಗಳನ್ನು ಎರಡು ಲಸಿಕೆ ಉತ್ಪಾದನಾ ಕಂಪನಿಗಳ ಬಾಧ್ಯತೆಯ ಭಾಗವಾಗಿ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದು ಅವುಗಳ ವಾಣಿಜ್ಯ ಮತ್ತು ಪರವಾನಗಿ ಬಾಧ್ಯತೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.

"

ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸುತ್ತಿರುವ ಕೋವಿಶೀಲ್ಡ್‌ನ ಪೇಟೆಂಟ್‌ ಆಸ್ಟ್ರಾಜನೆಕಾ ಬಳಿ ಇದೆ. ಹೀಗಾಗಿ ತಾನು ಉತ್ಪಾದಿಸಿದ್ದರಲ್ಲಿ ಸೀರಂ ಒಂದಿಷ್ಟುಭಾಗ ರಫ್ತು ಮಾಡಲೇ ಬೇಕು. ಇನ್ನು ಭಾರತ್‌ ಬಯೋಟೆಕ್‌ ಲಸಿಕೆ ಉತ್ಪಾದನೆಗೆ ಅಗತ್ಯ ಕಚ್ಚಾ ವಸ್ತು ಆಮದಿಗೆ ಮಾಡಿಕೊಂಡ ಒಪ್ಪಂದದಂತೆ ಒಂದಿಷ್ಟು ಭಾಗ ರಫ್ತು ಮಾಡಿದೆ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona