ನವದೆಹಲಿ(ಏ.03): ದೇಶದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಶುಕ್ರವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 81,466 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 80 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಒಂದೇ ದಿನ ಸೋಂಕು ಪತ್ತೆಯಾಗುತ್ತಿರುವುದು ಕಳೆದ ಆರು ತಿಂಗಳ ಅವಧಿಯಲ್ಲಿ ಇದೇ ಮೊದಲು. ಇದೇ ವೇಳೆ, 469 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು ನಾಲ್ಕು ತಿಂಗಳಲ್ಲೇ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.

ಹೊಸ ಸೋಂಕಿನೊಂದಿಗೆ ದೇಶದಲ್ಲಿನ ಒಟ್ಟಾರೆ ಕೊರೋನಾಪೀಡಿತರ ಸಂಖ್ಯೆ 1,23,03,131ಕ್ಕೆ ಏರಿದ್ದರೆ, ಮೃತರ ಸಂಖ್ಯೆ 1,63,396ಕ್ಕೆ ಹೆಚ್ಚಳವಾಗಿದೆ. 2020ರ ಅ.2ರಂದು ದೇಶದಲ್ಲಿ 81,484 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಡಿ.6ರಂದು 482 ಮಂದಿ ಸಾವಿಗೀಡಾಗಿದ್ದರು. ಆನಂತರ ಇಷ್ಟೊಂದು ಸಂಖ್ಯೆಯ ಸೋಂಕು, ಸಾವು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಈ ನಡುವೆ, ಸತತ 23ನೇ ದಿನವೂ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,14,696ಕ್ಕೆ ಹೆಚ್ಚಳವಾಗಿದೆ. ಇದು ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.5ರಷ್ಟಿದೆ. ಚೇತರಿಕೆ ಪ್ರಮಾಣ ಶೇ.93.67ಕ್ಕೆ ಕುಸಿದಿದೆ. ಸಾವಿನ ಸಂಖ್ಯೆಗೆ ಮಹಾರಾಷ್ಟ್ರದ ಅತ್ಯಧಿಕ ಕೊಡುಗೆ ಮುಂದುವರಿದಿದ್ದು, ಅಲ್ಲಿ 24 ತಾಸುಗಳ ಅವಧಿಯಲ್ಲಿ 249 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್‌ (58), ಛತ್ತೀಸ್‌ಗಢ (34), ತಮಿಳುನಾಡು (19), ಕರ್ನಾಟಕ (18) ನಂತರದ ಸ್ಥಾನದಲ್ಲಿವೆ.