ಅಮರಾವತಿ(ನ.07): ಈಗಾಗಲೇ ಶಾಲೆ ಪುನಾರಂಭಗೊಂಡ ರಾಜ್ಯಗಳ ಬೆಳವಣಿಗೆ ನೋಡಿ ತಮ್ಮ ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನಾರಂಭದ ನಿರೀಕ್ಷೆಯಲ್ಲಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳನ್ನು ಎಚ್ಚರಿಸುವ ಸುದ್ದಿಗಳು ಆಂಧ್ರ ಮತ್ತು ಉತ್ತರಾಖಂಡದಿಂದ ಬಂದಿದೆ. ನ.2ರಿಂದ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿರುವ ಆಂಧ್ರಪ್ರದೇಶದಲ್ಲಿ ದಿನೇದಿನೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೊರೋನಾ ಸೋಂಕು ಹರಡುತ್ತಿದೆ. ತರಗತಿಗಳು ಆರಂಭವಾದ ಕೇವಲ ನಾಲ್ಕು ದಿನದಲ್ಲಿ 829 ಶಿಕ್ಷಕರು ಮತ್ತು 575 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ. ಮತ್ತೊಂದೆಡೆ ಉತ್ತರಾಖಂಡದಲ್ಲೂ 80 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದ್ದು, ಹಲವು ಶಾಲೆಗಳನ್ನು ಬಂದ್‌ ಮಾಡಲಾಗಿದೆ.

ಈ ಎರಡೂ ರಾಜ್ಯಗಳ ಬೆಳವಣಿಗೆಗಳು ವಿದ್ಯಾರ್ಥಿಗಳು, ಪೋಷಕರ ಜೊತೆಜೊತೆಗೇ, ಶಿಕ್ಷಕ ಸಮುದಾಯದಲ್ಲೂ ಭಾರೀ ಆತಂಕ ಹುಟ್ಟಿಸಿದೆ.

ಆಂಧ್ರಾಂತಕ:

ಆಂಧ್ರದಲ್ಲಿ ಶಾಲೆ ಆರಂಭವಾದ ಮೊದಲ ಮೂರು ದಿನದಲ್ಲಿ 262 ಮಕ್ಕಳು ಹಾಗೂ 160 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿತ್ತು. ನಾಲ್ಕನೇ ದಿನ ಇದು ಕ್ರಮವಾಗಿ 575 ಹಾಗೂ 829ಕ್ಕೆ ಏರಿಕೆಯಾಗಿದೆ. ಇದು ಗುರುವಾರ ಮಧ್ಯಾಹ್ನ 3 ಗಂಟೆಯವರೆಗಿನ ವರದಿಯಾಗಿದ್ದು, ಶುಕ್ರವಾರದ ವೇಳೆಗೆ ಇನ್ನಷ್ಟುಶಿಕ್ಷಕರು ಹಾಗೂ ಮಕ್ಕಳಲ್ಲಿ ಸೋಂಕು ಪತ್ತೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಪ್ರೌಢಶಾಲೆಯ ತರಗತಿಗಳನ್ನು ಆರಂಭಿಸಿದ ನಂತರ ಸೋಂಕು ಶರವೇಗದಲ್ಲಿ ಹರಡುತ್ತಿರುವುದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಚಿಂತೆಗೊಳಗಾಗಿದ್ದಾರೆ. ದಿನೇದಿನೇ ಪ್ರೌಢಶಾಲೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಿ ಕಡಿಮೆಯಾಗುತ್ತಿದೆ. ಶಾಲೆ ಆರಂಭವಾದ ಮೊದಲ ದಿನ ಒಟ್ಟು ಶಿಕ್ಷಕರ ಪೈಕಿ ಶೇ.87.88ರಷ್ಟುಮತ್ತು ಶೇ.42ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ ಗುರುವಾರ ವಿದ್ಯಾರ್ಥಿಗಳ ಪ್ರಮಾಣ ಶೇ.35.70ಕ್ಕೆ ಇಳಿದಿದೆ.

ಪೌರಿ ಆತಂಕ:

ಉತ್ತರಾಖಂಡದ ಪೌರಿ ಜಿಲ್ಲೆಯ 80 ಶಿಕ್ಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಜೊತೆಗೆ ಸೋಂಕಿತರ ಶಿಕ್ಷಕರ ಸಂಪರ್ಕಕ್ಕೆ ಬಂದಿದ್ದ ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಅವರನ್ನು ಪ್ರತ್ಯೇಕವಾಗಿ ಇರಿಸುವ ಯತ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ನ.2ರಿಂದ ಶಾಲಾ-ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರೆ ಪರೀಕ್ಷಾ ವರದಿಗೂ ಮುನ್ನವೇ ಸೋಂಕಿತ ಶಿಕ್ಷಕರು ಶಾಲೆಗೆ ಆಗಮಿಸಿದ ಕಾರಣ ಅಲ್ಲಿ ಅವಾಂತರ ಸಂಭವಿಸಿದೆ.