ಮುಂಬೈ(ಏ.05): ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿರುವ ಪುಣೆಯಲ್ಲಿ ಆಸ್ಪತ್ರೆಯ ಆಮ್ಲಜನಕ ಬೆಡ್‌ ಲಭ್ಯವಾಗದ ಹಿನ್ನೆಲೆಯಲ್ಲಿ 73 ವರ್ಷದ ವೃದ್ಧೆಯೊಬ್ಬರು ಕಾರಿನಲ್ಲೇ ಸಾವಿಗೀಡಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಕೊರೋನಾಕ್ಕೆ ತುತ್ತಾಗಿದ್ದ ವೃದ್ಧೆಯನ್ನು ಆಸ್ಪತ್ರೆಯ ಆಮ್ಲಜನಕದ ಸೌಲಭ್ಯ ಹೊಂದಿದ ಬೆಡ್‌ನಲ್ಲಿ ದಾಖಲಿಸಲು ಅವರ ಪುತ್ರ 15 ಗಂಟೆಗಳ ಕಾಲ ಕಾರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಆಮ್ಲಜನಕದ ಬೆಡ್‌ಗಳ ಕೊರತೆಯಿಂದಾಗಿ ಯಾವುದೇ ಆಸ್ಪತ್ರೆಗಳು ವೃದ್ಧೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ತಮ್ಮ ತಾಯಿ ಕಾರಿನಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಆಕೆಯ ಪುತ್ರ ಕಣ್ಣೀರಿಟ್ಟಿದ್ದಾರೆ.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯಿಸಿದ ಪುಣೆಯ ಪಾಲಿಕೆ ಅಧಿಕಾರಿಗಳು, ಆಸ್ಪತ್ರೆಗೆ ದಾಖಲಿಸಿಕೊಳ್ಳದ್ದರಿಂದ ಮಾರ್ಗಮಧ್ಯೆಯೇ ವೃದ್ಧೆ ಸಾವಿಗೀಡಾದ ಘಟನೆ ಬಗ್ಗೆ ಗೊತ್ತಿಲ್ಲ. ಆದರೆ ಪುಣೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಎದುರಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಸೋಮವಾರದ ಒಳಗಾಗಿ ಸೋಂಕಿತರ ಗುಣಮುಖಕ್ಕಾಗಿ ಹೆಚ್ಚಿನ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.