ಆನ್ಲೈನ್ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವಕನನ್ನು ಮದುವೆಯಾಗಲು 61 ವರ್ಷದ ಕೆನಡಾ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದಳು. ನಂತರ ಇಬ್ಬರ ಮಧ್ಯೆ ಏನು ನಡೀತು? ಇಲ್ಲಿದೆ ಸಿನಿಮಾವನ್ನೂ ಮೀರಿಸುವ ರೋಚಕ ಸ್ಟೋರಿ.
ನವದೆಹಲಿ: ಇದು ಸಿನಿಮಾ ಕಥೆಯನ್ನೂ ಮೀರಿಸುವ ಸ್ಟೋರಿ. ಅವರಿಬ್ಬರ ಮಧ್ಯೆ ಆನ್ಲೈನ್ನಲ್ಲಿ ಪ್ರೀತಿ ಚಿಗುರಿತ್ತು. ಪ್ರೇಯಸಿ ಸಾವಿರಾರು ಕಿಲೋಮೀಟರ್ ದೂರದ ಕೆನಡಾದಿಂದ ವಿಮಾನ ಹತ್ತಿ ಭಾರತಕ್ಕೆ ಬಂದಿದ್ದಳು. ಆದರೆ ಆಕೆ ಬಂದ ಎರಡೇ ದಿನದಲ್ಲಿ ಪ್ರೇಮಿಯ ಅಸಲಿ ವರಸೆ ಬಯಲಾಗಿದೆ. ಅಷ್ಟಕ್ಕೂ ಆ ಮನೆಯೊಳಗೆ ನಡೆದಿದ್ದೇನು? ಬೆಳ್ಳಂಬೆಳಗ್ಗೆ 4 ಗಂಟೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದೇಕೆ? ಇಲ್ಲಿದೆ ವಿವರ..
ಡೇಟಿಂಗ್ ಆ್ಯಪ್ನಲ್ಲಿ ಲವ್!
ಈ ರೋಚಕ ಲವ್ ಸ್ಟೋರಿ ಶುರುವಾಗೋದು ಸುಮಾರು ಒಂದು ವರ್ಷದ ಹಿಂದೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯ. ಪ್ರತಿ ದಿನದ ಚಾಟಿಂಗ್ ನಂತರ ಪ್ರೀತಿಗೆ ತಿರುಗಿತು. ರೊಮ್ಯಾಂಟಿಕ್ ಮಾತುಕತೆಗಳು ಮುಂದುವರಿದು, ಕೊನೆಗೆ ಇಬ್ಬರೂ ಮದುವೆಯಾಗಿ ಒಟ್ಟಿಗೆ ಬಾಳುವ ನಿರ್ಧಾರಕ್ಕೆ ಬಂದರು. ಪ್ರೀತಿಸಿದವನ ಕೈ ಹಿಡಿಯುವ ದೊಡ್ಡ ಕನಸು ಹೊತ್ತ 61 ವರ್ಷದ ಕೆನಡಾ ಮಹಿಳೆ, ಟೂರಿಸ್ಟ್ ವೀಸಾ ಪಡೆದು ನವೆಂಬರ್ 11ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಅಂದಹಾಗೆ ಹರಿಯಾಣದ ಪಾಣಿಪತ್ ನಿವಾಸಿ ನಿತಿನ್ ಎಂಬಾತ ಆಕೆಯನ್ನು ಸ್ವಾಗತಿಸಲು ದೆಹಲಿ ಏರ್ಪೋರ್ಟ್ಗೆ ಬಂದಿದ್ದ. ಆಕೆಯನ್ನು ಕರೆದುಕೊಂಡು ರಾಜಸ್ಥಾನದ ಕೋಟ್ಪುಟ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾಣಾದಲ್ಲಿರುವ 'ಬಿಬಿ ಬಿಲ್ಡರ್ಸ್ ಸೊಸೈಟಿ'ಯ ಫ್ಲ್ಯಾಟ್ಗೆ ತೆರಳಿದ್ದ. ಅದು ನಿತಿನ್ ಅವರ ಮಾವ ಮತ್ತು ಅತ್ತೆಯ ಫ್ಲ್ಯಾಟ್ ಆಗಿತ್ತು. ಅಲ್ಲಿ ಇಬ್ಬರೂ ಸುಮಾರು ಎರಡು ದಿನಗಳ ಕಾಲ ಒಟ್ಟಿಗೆ ತಂಗಿದ್ದರು.
ಕಥೆಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದು ವಯಸ್ಸು!
ಎಲ್ಲವೂ ಚೆನ್ನಾಗಿಯೇ ಇದೆ ಎನ್ನುವಾಗಲೇ ಕಥೆಗೆ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿತು. ಕೆನಡಾ ಮಹಿಳೆಯ ವಯಸ್ಸು 61 ಎಂದು ಗೊತ್ತಾಗಿದೆ. ಮದುವೆಯಾಗಲು ನಿತಿನ್ ನೇರವಾಗಿ ನಿರಾಕರಿಸಿದ. ಇಷ್ಟೊಂದು ದೂರದಿಂದ ಮದುವೆಯ ಕನಸು ಕಟ್ಟಿಕೊಂಡು ಬಂದಿದ್ದ ಮಹಿಳೆಗೆ ಸಿಡಿಲು ಬಡಿದಂತಾಯಿತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೇರಿತು. ಜಗಳ ಕೈಮೀರಿದಾಗ, ಕಂಗಾಲಾದ ಕೆನಡಾ ಮಹಿಳೆ ನವೆಂಬರ್ 13ರಂದು ನೇರವಾಗಿ ಕೆನಡಾ ರಾಯಭಾರ ಕಚೇರಿ ಸಂಪರ್ಕಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದರು. ವಿಷಯದ ಗಂಭೀರತೆ ಅರಿತ ರಾಯಭಾರ ಕಚೇರಿ ತಕ್ಷಣವೇ ಸ್ಥಳೀಯ ಪೊಲೀಸರನ್ನು ಎಚ್ಚರಿಸಿತು. ನವೆಂಬರ್ 14ರ ಬೆಳ್ಳಂಬೆಳಗ್ಗೆ ಸುಮಾರು 4 ಗಂಟೆಗೆ ನೀಮ್ರಾಣಾದ ಆ ಫ್ಲ್ಯಾಟ್ಗೆ ಪೊಲೀಸರು ದಿಢೀರ್ ಎಂಟ್ರಿ ಕೊಟ್ಟರು!
ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಸಾರ್ವಜನಿಕ ಶಾಂತಿ ಭಂಗ ತಂದ ಆರೋಪದ ಮೇಲೆ ನಿತಿನ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಚಾರಣೆ ವೇಳೆ ನಿತಿನ್ ಪಾಣಿಪತ್ನ ಖಾಸಗಿ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಇತ್ತ ಕೆನಡಾ ಮಹಿಳೆಯನ್ನು ಕೋಟ್ಪುಟ್ಲಿಯ ಕೇಂದ್ರಕ್ಕೆ ಕಳುಹಿಸಲಾಗಿದೆ.
ಪೊಲೀಸರು ಪ್ರಕರಣದ ಸುತ್ತಲಿನ ಎಲ್ಲಾ ಆಯಾಮಗಳ ತನಿಖೆ ನಡೆಸುತ್ತಿದ್ದಾರೆ. ಕೆನಡಾ ರಾಯಭಾರ ಕಚೇರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಹಿಳೆಯನ್ನು ಸುರಕ್ಷಿತವಾಗಿ ಕೆನಡಾಗೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಆನ್ಲೈನ್ನಲ್ಲಿ ಶುರುವಾದ ಪ್ರೇಮಕಥೆ ಎರಡೇ ದಿನದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಅಂತ್ಯಕಂಡಿದೆ.














