* ಮುಂಬೈ ಮೂಲದ ವ್ಯಕ್ತಿಯಲ್ಲಿ ಸೋಂಕು* ಗುಜರಾತಲ್ಲಿ ಎಕ್ಸ್‌ಇ ರೂಪಾಂತರಿ ಪತ್ತೆ: ದೇಶದ ಮೊದಲ ಕೇಸು* ಒಮಿಕ್ರೋನ್‌ಗಿಂತ 10 ಪಟ್ಟು ಅಪಾಯಕಾರಿ ಎಕ್ಸ್‌ಇ* ಗುಜರಾತ್, ಮುಂಬೈನಲ್ಲಿ ಮತ್ತೊಂದು ತಳಿ ಎಕ್ಸ್‌ಎಂ ಸಹ ಪತ್ತೆ
ಅಹ್ಮದಾಬಾದ್(ಏ.10): ಭಾರತದಲ್ಲಿ ಕೊರೋನಾ ಪ್ರಕರಣಗಳ ತೀವ್ರ ಇಳಿಕೆ ನಡುವೆಯೇ ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಲಾದ ವೈರಸ್‌ನ ಹೊಸ ರೂಪಾಂತರಿ ತಳಿ ಎಕ್ಸ್‌ಇ ಗುಜರಾತಿನ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಇದು ದೇಶದ ಮೊದಲ ‘ಎಕ್ಸ್‌ಇ’ ಪ್ರಕರಣವಾಗಿದೆ.
ಇದಕ್ಕೂ ಮೊದಲು ಬುಧವಾರ ಮುಂಬೈನಲ್ಲಿ ಎಕ್ಸ್‌ಇ ಪ್ರಕರಣ ಪತ್ತೆಯಾಗಿದೆ ಎಂದು ಮುಂಬೈ ಪಾಲಿಕೆ ತಿಳಿಸಿತ್ತು. ಆದರೆ ಎಕ್ಸ್‌ಇ ಎಂಬುದು ಖಚಿತವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದರು. ಹೀಗಾಗಿ ಗುಜರಾತ್ ಪ್ರಕರಣ, ದೇಶದ ಎಕ್ಸ್‌ಇ ಪ್ರಕರಣವಾಗಿದೆ.
ಈ ನಡುವೆ ಬಿಎ.1 ಮತ್ತು ಬಿಎ.2ನ ಇನ್ನೊಂದು ರೂಪಾಂತರಿ ಎಕ್ಸ್‌ಎಂ ಗುಜರಾತ್ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದೆ.
ಎಕ್ಸ್‌ಇ ಸೋಂಕು ದೃಢ:
ಕಳೆದ ತಿಂಗಳು ಗುಜರಾತಿನ ವಡೋದರದಲ್ಲಿ ಓಡಾಡಿದ್ದ ಮುಂಬೈ ಮೂಲದ 67 ವರ್ಷದ ವಯೋವೃದ್ಧರಲ್ಲಿ ‘ಎಕ್ಸ್‌ಇ’ರೂಪಾಂತರಿ ಸೋಂಕು ದೃಢಪಟ್ಟಿದೆ. ವಡೋದರಕ್ಕೆ ಭೇಟಿ ನೀಡಿದ್ದ ವ್ಯಕ್ತಿಯಲ್ಲಿ ಮಾ.12ರಂದು ಕೊರೋನಾ ದೃಢಪಟ್ಟಿತ್ತು. ಅಧಿಕಾರಿಗಳಿಗೆ ಮಾಹಿತಿ ನೀಡದೇ ಅವರು ಮರುದಿನವೇ ಮುಂಬೈಗೆ ತೆರಳಿದ್ದರು. ಆದರೆ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ವ್ಯಕ್ತಿಗೆ ತಗುಲಿದ್ದ ಸೋಂಕು ಎಕ್ಸ್‌ಇ ಎಂಬುದು ದೃಢವಾಗಿದೆ. ಸದ್ಯ ಆ ವ್ಯಕ್ತಿ ಮುಂಬೈನಲ್ಲಿದ್ದು ಆರೋಗ್ಯವಾಗಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದ್ದ ಮೂವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕ್ಸ್‌ಇ ಎಂಬುದು ಒಮಿಕ್ರೋನ್‌ನ ಬಿಎ.1 ಮತ್ತು ಬಿ.ಎ2ನ ಹೈಬ್ರಿಡ್ ರೂಪಾಂತರಿಯಾಗಿದ್ದು ಒಮಿಕ್ರೋನ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎನ್ನಲಾಗಿದೆ.
