ಭೋಪಾಲ್(ಏ.26): ಹೇರ್‌ ಕಟ್ಟಿಂಗ್ ಮಾಡಿಸಲು ಹೋಗಿದ್ದ ಆರು ಮಂದಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಈ ಕುರಿತು ಎನ್‌ಡಿಟಿವಿ ವರದಿ ಮಾಡಿದ್ದು, ವರದಿಯಲ್ಲಿ ಕ್ಷೌರಿಕ ಹೇರ್‌ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡುವಾಗ ಎಲ್ಲರಿಗೂ ಒಂದೇ ಬಟ್ಟೆ ಉಪಯೋಗಿಸಿರುವುದಾಗಿ ಹೇಳಲಾಗಿದೆ. 

ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!

ಇನ್ನು ಇಂದೋರ್‌ನ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ಗ್ರಾಮದ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಮರಳಿದ್ದು, ಏಪ್ರಿಲ್ 5 ರಂದು ಹೇರ್ ಕಟ್ಟಿಂಗ್ ಮಾಡಿಸಿದ್ದ. ಆದರೆ ಇದಾದ ಬಳಿಕ ಆತನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು. ಇದಾದ ಬಳಿಕ ಆತ ತೆರಳಿದ್ದ ದಿನ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಸೆಲೂನ್‌ಗೆ ತೆರಳಿದ್ದ 12 ಮಂದಿಯನ್ನು ಪತ್ತೆ ಹಚ್ಚಿ ಕೊರೋನಾ ಪರೀಕ್ಷೆ ನಡೆಸಿದ್ದು, ಇವರಲ್ಲಿ ಆರು ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಿದ್ದರೂ ಅಚ್ಚರಿ ಎಂಬಂತೆ ಇವರೆಲ್ಲರಿಗೂ ಶೇವಿಂಗ್ ಹಾಗೂ ಹೇರ್ ಕಟ್ಟಿಂಗ್ ಮಾಡಿಸಿದ್ದ ಕ್ಷೌರಿಕನಲ್ಲಿ ಈ ಸೋಂಕು ಕಾಣಿಸಿಲ್ಲ. ಇನ್ನು ಖರ್ಗಾಂವ್ ಹಳ್ಳಿಯಲ್ಲಿ ಈವರೆಗೂ ಒಟ್ಟು 60 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಇಡೀ ಹಳ್ಳಿಯನ್ನೇ ಸೀಲ್‌ಡೌನ್ ಮಾಡಲಾಗಿದೆ.