ಬೆಂಗಳೂರು (ನ.01):  ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟನೆಯಲ್ಲಿ ತೊಡಗಿದ್ದ ಶಂಕಿತ ಉಗ್ರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರಿನ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಸೇರಿದಂತೆ ಐಎಸ್‌ಡಿಯ ಐವರು ಪೊಲೀಸರು ‘ಕೇಂದ್ರ ಗೃಹ ಮಂತ್ರಿ’ ಪದಕಕ್ಕೆ ಭಾಜನರಾಗಿದ್ದಾರೆ.

ಆತಂರಿಕ ಭದ್ರತಾ ವಿಭಾಗದ ಐಜಿಪಿ (ಪ್ರಭಾರ) ಹಾಗೂ ಬೆಂಗಳೂರಿನ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್ಪಿಗಳಾದ ಎಸ್‌.ಕೆ.ಉಮೇಶ್‌, ಡಿ.ಕುಮಾರ್‌, ಇನ್ಸ್‌ಪೆಕ್ಟರ್‌ಗಳಾದ ಸುಶೀಲಾ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ವೈ.ಶಂಕರ್‌ ಹಾಗೂ ಎನ್‌.ಪ್ರಕಾಶ್‌ ಅವರಿಗೆ ಪ್ರಸಕ್ತ ಸಾಲಿನ ಗೃಹ ಸಚಿವರ ಪುರಸ್ಕಾರ ಸಂದಿದೆ.

ರೈಲಿನಲ್ಲಿ ಮಹಿಳಾ ಪ್ರಯಾಣಿಕರ ನೆರವಿಗೆ ಬಂದಿದೆ 'ಮೇರಿ ಸಹೇಲಿ'

ಇದೇ ವರ್ಷ ಆರಂಭದಲ್ಲಿ ಐಸಿಸ್‌ ಸಂಘಟನೆ ಜತೆ ಗುರುತಿಸಿಕೊಂಡಿದ್ದ ತಮಿಳುನಾಡು ಮೂಲದ ಆಲ್‌ ಹಿಂದ್‌ನ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಜಿಹಾದಿ ಗ್ಯಾಂಗ್‌ ಸಂಘಟಿತವಾಗಿತ್ತು. ಈ ಜಾಲದ ಬಗ್ಗೆ ಮಾಹಿತಿ ತಿಳಿದ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳೊಂದಿಗೆ ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದ ಐಎಸ್‌ಡಿ ಪೊಲೀಸರು, ನಗರದ ಸದ್ದುಗುಂಟೆಪಾಳ್ಯದಲ್ಲಿ ಐಸಿಸ್‌ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್‌ ಮೆಹಬೂಬ್‌ ಪಾಷ ಸೇರಿದಂತೆ 10ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಿದ್ದರು.