ಹೈದರಾಬಾದ್(ಆ. 21): ತೆಲಂಗಾಣದ ಶ್ರೀಶೈಲಂ ಜಲ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಆರು ಮಂದಿ ಸಜೀವ ದಹನಗೊಂಡಿದ್ದು, ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಹುಡುಕಾಟ ಮುಂದುವರೆದಿದೆ. ಇವರೆಲ್ಲರೂ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದ ವೇಳೆ ಹೈಡ್ರೋಇಲೆಕ್ಟ್ರಿಕ್ ಘಟಕದೊಳಗೆ ಸಿಲುಕಿಕೊಂಡಿದ್ದರೆನ್ನಲಾಗಿದೆ.

ಈ ದುರಂತದ ಮಾಹಿತಿ ಸಿಕ್ಕ ಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಹತ್ತು ಮಂದಿಯನ್ನು ಸುರಕ್ಷಿತವಾಗಿ ಹೊರ ತಂದಿದ್ದರು. ಬೆಂಕಿ ಸುಮಾರು ರಾತ್ರ  10:30ಕ್ಕೆ ತಗುಲಿದ್ದು, ಒಳಗಿದ್ದವರನ್ನು ರಕ್ಷಿಸಲು ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಹೀಗಿದ್ದರೂ ಆರು ಮಂದಿಯ ಪ್ರಾಣ ಕಾಪಾಡಲು ಸಾಧ್ಯವಾಗಿಲ್ಲ.

ಇನ್ನು ಬೃಹತ್‌ ಸ್ಪೋಟದಿಂದಾಗಿ ನಾಲ್ಕನೇ ಘಟಕದಲ್ಲಿ ಸಂಪೂರ್ಣ ಬೆಂಕಿ ಆವರಿಸುವ ಜೊತೆಗೆ ಸಂಪೂರ್ಣವಾಗಿ ಹೊಗೆ ತುಂಬಿಕೊಂಡಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಒಳ ಪ್ರವೇಶಕ್ಕೆ ಸಾಧ್ಯವಾಗಿರಲಿಲ್ಲ. ಸದ್ಯ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಎಲ್ಲಾ ಕೆಲಸವನ್ನ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಅಲ್ಲದೇ ಹೊರ ಬಂದ ಹತ್ತು ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ಯಾನೆಲ್‌ ಬೋರ್ಡ್‌ಗೆ ಬೆಂಕಿ!

ಇನ್ನು ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ಯೂಟ್‌ ಮೂಲ ಕಾರಣ ಎಂದು ವಿದ್ಯುತ್‌ ಸ್ಥಾವರದ ಮೂಲಗಳ ತಿಳಿಸಿವೆ. ಆದರೆ ತನಿಖೆ ಬಳಿಕವಷ್ಟೆ ನಿಜಾಂಶ ಹೊರಬರಬೇಕಿದೆ. ಮೂಲಗಳ ಪ್ರಕಾರ ಪ್ಯಾನೆಲ್‌ ಬೋರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.