ಶ್ರೀನಗರ(ನ.14): ದೀಪಾವಳಿ ಮುನ್ನಾ ದಿನ ಗಡಿಯಲ್ಲಿ ಪಾಕಿಸ್ತಾನ ರಕ್ತದೋಕುಳಿ ಹರಿಸಿದೆ. ಜಮ್ಮು- ಕಾಶ್ಮೀರದ ಗುರೇಜ್‌ನಿಂದ ಉರಿ ವಲಯದವರೆಗೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಸೇರಿದಂತೆ 10 ಮಂದಿ ಬಲಿಯಾಗಿದ್ದಾರೆ. ಇದಕ್ಕೆ ಭಾರತೀಯ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನದ 7 ಯೋಧರು ಸೇರಿದಂತೆ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮತ್ತೊಂದೆಡೆ ಭಾರತ ತೀವ್ರ ಸ್ವರೂಪದಲ್ಲಿ ನಡೆಸಿದ ದಾಳಿಯ ಪರಿಣಾಮವಾಗಿ ಪಾಕಿಸ್ತಾನದ ಶಸ್ತ್ರಾಸ್ತ್ರ ಕೋಠಿಗಳು, ಉಗ್ರಗಾಮಿ ನೆಲೆಗಳು, ಬಂಕರ್‌ಗಳು ನಾಶವಾಗಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆ ಭಾರತದ ನಾಗರಿಕ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಹೇಳಿದ್ದಾರೆ.

ದಿನವಿಡೀ ದಾಳಿ:

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಗುರೇಜ್‌ ವಲಯದಿಂದ ಉರಿ ವಲಯದವರೆಗೂ ಪಾಕ್‌ ಪಡೆಗಳು ಹಲವಾರು ಬಾರಿ ಕದನವಿರಾಮ ಉಲ್ಲಂಘಿಸಿದ್ದು, ಮಾರ್ಟರ್‌ ಶೆಲ್‌ಗಳು ಹಾಗೂ ಗುಂಡಿನ ದಾಳಿ ನಡೆಸಿವೆ.

ಉರಿ ವಲಯದ ನಂಬಾ ಎಂಬಲ್ಲಿ ಇಬ್ಬರು ಭಾರತೀಯ ಸೇನೆಯ ಇಬ್ಬರು ಯೋಧರು, ಹಾಜಿ ಪೀರ್‌ ಎಂಬಲ್ಲಿ ಬಿಎಸ್‌ಎಫ್‌ನ ಸಬ್‌ ಇನ್ಸ್‌ಪೆಕ್ಟರ್‌ ರಾಕೇಶ್‌ ದೋವಲ್‌ (39), ಉರಿ ವಲಯದ ಕಮಾಲ್‌ಕೋಟ್‌ನಲ್ಲಿ ಇಬ್ಬರು ನಾಗರಿಕರು, ಬಾಲ್ಕೋಟ್‌ನಲ್ಲಿ ಒಬ್ಬ ಮಹಿಳೆ ಪಾಕಿಸ್ತಾನದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ಭದ್ರತಾ ಪಡೆ ಮೂಲಗಳು ಹೇಳಿವೆ.

ಇನ್ನು ಕುಪ್ವಾರಾ ಜಿಲ್ಲೆಯ ಕೇರನ್‌ ವಲಯದಲ್ಲಿ ಉಗ್ರರು, ಪಾಕಿಸ್ತಾನಿ ಭದ್ರತಾ ಪಡೆ ನಡೆಸಿದ ಕದನವಿರಾಮ ಉಲ್ಲಂಘನೆಯ ನೆರವು ಪಡೆದು ಒಳನುಸುಳಲು ಯತ್ನಿಸಿದ್ದರು. ಇದನ್ನು ಸೇನೆ ವಿಫಲಗೊಳಿಸಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಭಾರತದ ಪ್ರತಿದಾಳಿ:

ಪಾಕಿಸ್ತಾನಕ್ಕೆ ಭಾರತ ಪರಿಣಾಮಕಾರಿ ಪ್ರತಿದಾಳಿ ನಡೆಸುತ್ತಿದೆ ಎಂದು ಸೇನಾಪಡೆ ವಕ್ತಾರರು ಹೇಳಿದ್ದಾರೆ. ಮೂಲಗಳ ಪ್ರಕಾರ, ಭಾರತದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 7ರಿಂದ 8 ಯೋಧರು ಹತರಾಗಿದ್ದಾರೆ. ಇವರಲ್ಲಿ 2 ಅಥವಾ 3 ಪಾಕಿಸ್ತಾನಿ ಎಸ್‌ಪಿಜಿ ಪಡೆಯ ಕಮಾಂಡೋಗಳೂ ಇದ್ದಾರೆ.

ಈ ನಡುವೆ ಭಾರತ ನಡೆಸಿದ ಶೆಲ್‌ ದಾಳಿಯಲ್ಲಿ ಪಾಕಿಸ್ತಾನದ ಕೆಲವು ನಾಗರಿಕ ಪ್ರದೇಶಗಳು ಹಾನಿಗೊಳಗಾಗಿದ್ದು, ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್‌ ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಪಾಕ್‌ ಮಾಧ್ಯಮಗಳಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳ ದೃಶ್ಯಗಳು ಪ್ರಸಾರವಾಗಿವೆ.

ನವೆಂಬರ್‌ 7-8ರಂದೂ ಇಂಥದ್ದೇ ಒಳನುಸುಳುವಿಕೆ ಯತ್ನ ನಡೆದಿತ್ತು. ಆಗ 3 ಉಗ್ರರು ಹಾಗೂ ಭಾರತದ 3 ಯೋಧರು ಸಾವನ್ನಪ್ಪಿದ್ದರು.