ಗುವಾಹಟಿ(ಏ.28): ಅಸ್ಸಾಂನ ಗುವಾಹಟಿ ಸೇರಿದಂತೆ ಈಶಾನ್ಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 7.55 ಕ್ಕೆ ಸಂಭವಿಸಿದ ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿದೆ. ಅಸ್ಸಾಂನ ಸೋನಿತ್ಪುರ ಇದರ ಕೇಂದ್ರ ಬಿಂದು ಎಂದು ಹೇಳಲಾಗಿದೆ.

ಕಂಪನದ ಅನುಭವ ಆಗುತ್ತಿದ್ದಂತೆ ಭಯಭೀತರಾದ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಭೂಕಂಪದ ತೀವ್ರತೆಯಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. 

ಭೂಕಂಪದ ಕೇಂದ್ರಬಿಂದು ಅಸ್ಸಾಂನ ತೇಜ್‌ಪುರದಿಂದ ಪಶ್ಚಿಮಕ್ಕೆ 43 ಕಿ.ಮೀ ದೂರದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಬೆಳಿಗ್ಗೆ 7:51 ಕ್ಕೆ ಮೇಲ್ಮೈಯಿಂದ 17 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಹಾನಿಗೀಡಾದ ಕಟ್ಟಡದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ವಿವರಗಳು ಇನ್ನೂ ದೊರೆಯಬೇಕಿದೆ ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ ಬಳಿ 5.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಅಸ್ಸಾಂನಲ್ಲಿ ಭೂಕಂಪ ಸಂಭವಿಸಿದೆ.