ನವದೆಹಲಿ(ಜೂ.07): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇಶದಲ್ಲಿ ದೇಗುಲ, ಮಸೀದಿ, ಚಚ್‌ರ್‍, ಗುರುದ್ವಾರದಂತಹ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ಪುನಾರಂಭಗೊಳ್ಳುತ್ತಿವೆ. ಆದರೆ ಶೇ.57ರಷ್ಟುಭಕ್ತಾದಿಗಳು ಧಾರ್ಮಿಕ ಸ್ಥಳಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸಂಗತಿ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ.

ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್‌ ಸರ್ಕಲ್ಸ್‌ ವಿವಿಧ ಪ್ರದೇಶಗಳ 8 ಸಾವಿರಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಸಮೀಕ್ಷೆಯ ವೇಳೆ ಜನರಿಗೆ ಧಾರ್ಮಿಕ ಕೇಂದ್ರ ಹಾಗೂ ಹೋಟೆಲ್‌ ಆರಂಭಕ್ಕೆ ಸಂಬಂಧಿಸಿದಂತೆ 4 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ಶೇ.57ರಷ್ಟುಜನರು ತಾವು ಇನ್ನೂ ಒಂದು ತಿಂಗಳು ದೇವಾಲಯಗಳಿಗೆ ತೆರಳುವುದಿಲ್ಲ. ವೈರಸ್‌ ತಗಲುವ ಅಪಾಯದಿಂದ ದೂರ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಶೇ.32ರಷ್ಟುಜನರು ಮಾತ್ರ ತಾವು ದೇವಾಲಯಗಳಿಗೆ ತೆರಳುತ್ತೇವೆ ಎಂದು ಹೇಳಿದರೆ, ಶೇ.11ರಷ್ಟುಮಂದಿ ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್‌: ಹೋಟೆಲ್, ಮಾಲ್‌ ಓಪನ್!

ರೆಸ್ಟೋರೆಂಟ್‌, ಮಾಲ್‌ಗೂ ಹೋಗಲ್ಲ

ಇದೇ ವೇಳೆ ಶೇ.74ರಷ್ಟುಮಂದಿ ತಾವು ಇನ್ನೂ 1 ತಿಂಗಳು ತಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಿಗೆ ಹೋಗಲು ಬಯಸುವುದಿಲ್ಲ ಎಂದು ಹೇಳಿದರೆ, ಶೇ.10ರಷ್ಟುಮಂದಿ ಮಾತ್ರ ಹೋಟೆಲ್‌ ರೆಸ್ಟೋರೆಂಟ್‌ಗಳಿಗೆ ತೆರಳಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಶೇ.70ರಷ್ಟುಮಂದಿ ತಾವು ಇನ್ನೊಂದು ತಿಂಗಳು ಶಾಪಿಂಗ್‌ ಮಾಲ್‌ಗಳತ್ತ ಹೋಗಲ್ಲ ಎಂದು ಹೇಳಿದ್ದಾರೆ.

ಇನ್ನು ಹೋಟೆಲ್‌ಗಳಿಗೆ ಭೇಟಿ ನೀಡುವುದಕ್ಕೆ ಸಂಬಂಧಿಸಂತೆ ಕೇಳಲಾದ ಪ್ರಶ್ನೆಗೆ ಶೇ.10ರಷ್ಟುಮಂದಿ ತಾವು ಹೋಟೆಲ್‌ಗಳಿಗೆ ಹೋಗಲು ಬಯಸುತ್ತೇವೆ ಎಂದು ಹೇಳಿದರೆ ಶೇ.81ರಷ್ಟುಜನರು ತಾವು ಹೋಟೆಲ್‌ಗಳಿಗೆ ಭೇಟಿ ನೀಡುವುದಿಲ್ಲ ಹೇಳಿದ್ದಾರೆ.

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಜನರು ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೊರಗಿನ ಸ್ಥಳಗಳಿಗೆ ತೆರಳಲು ಬಯಸುತ್ತಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಲೋಕಲ್‌ ಸರ್ಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್‌ ಗುಪ್ತಾ ಹೇಳಿದ್ದಾರೆ.