ಮಹಿಳೆಯೊಬ್ಬರ ಪುತ್ರ ತಮ್ಮ ಪುತ್ರಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾದನೆಂಬ ಸಿಟ್ಟಿಗೆ, ವರನ ತಾಯಿಯನ್ನು ಅರೆವಸ್ತ್ರಗೊಳಿಸಿ, ಹಲ್ಲೆ ಮಾಡಿ ಮೆರವಣಿಗೆ ಮಾಡಿದ ಬೀಗರ ಕಡೆಯವರು! 

ತರ್ನ್ ತರಣ್, ಪಂಜಾಬ್: ಮಗ ಹುಡುಗಿಯೊಬ್ಬಳನ್ನು ಓಡಿಸಿಕೊಂಡು ಹೋಗಿ ವಧುವಿನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ, ವರನ ತಾಯಿಯನ್ನು ಅರೆಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಪಂಜಾಬ್‌ನ ತರ್ನ್ ತರಣ್‌ನ ವಾಲ್ತೋಹಾ ಗ್ರಾಮದಲ್ಲಿ ನಡೆದಿದೆ. 

ಮಾರ್ಚ್ 31 ರಂದು ಸಂತ್ರಸ್ತೆಯ ಮಗ ಯುವತಿಯೊಂದಿಗೆ ಓಡಿ ಹೋಗಿ ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅವಳನ್ನು ಮದುವೆಯಾದ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ತಾಯಿ 55 ವರ್ಷದ ಮಹಿಳೆಯಾಗಿದ್ದು, ಅಕೆಯ ಮೇಲೆ ಹಲ್ಲೆ ನಡೆಸಿದ ಓಡಿ ಹೋದ ಯುವತಿಯ ಪೋಷಕರು, ಬಳಿಕ ಆಕೆಯನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.


ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆಕೆ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಮಗನ ಮಾವನ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ. ಸಂತ್ರಸ್ತೆಯನ್ನು ಪರೇಡ್ ನಡೆಸುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

 ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಕುಲ್ವಿಂದರ್ ಕೌರ್ ಮಣಿ, ಶರಣಜಿತ್ ಸಿಂಗ್ ಶಾನಿ ಮತ್ತು ಗುರ್ಚರಣ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೂಕ ಇಳಿಸ್ತಿರೋ ಸುದೀಪ್ ಮಗಳು ಸಾನ್ವಿ; ಇಲ್ಲಿದೆ ಟ್ರಾನ್ಫರ್ಮೇಶನ್ ವಿಡಿಯೋ

ದೂರಿನ ಆಧಾರದ ಮೇಲೆ, ಏಪ್ರಿಲ್ 3ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ದುರುದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ), 354 ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲದ ಬಳಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 354D (ಹಿಂಬಾಲಿಸುವಿಕೆ), 323 (ಸ್ವಯಂಪ್ರೇರಿತವಾಗಿ ಗಾಯವನ್ನು ಉಂಟುಮಾಡುವುದು) ಮತ್ತು 149 (ಕಾನೂನುಬಾಹಿರ ಗುಂಪುಗೂಡುವುದು) ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ತಪ್ಪಿತಸ್ಥರು ತಲೆ ಮರೆಸಿಕೊಂಡಿದ್ದು ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.