ಬೆಂಗಳೂರು(ಫೆ.23): ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಮಂತ್ರ ಜಪಿಸುತ್ತಿರುವ ಕೇಂದ್ರ ಸರ್ಕಾರ, ಇದೀಗ ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನಗಳಿಗೆ ಸ್ವದೇಶಿ ರಾಡಾರ್‌ಗಳನ್ನೇ ಅಳವಡಿಸಲು ಮುಂದಾಗಿದೆ.

ಬೆಂಗಳೂರಿನ ಎಚ್‌ಎಎಲ್‌ನಿಂದ 123 ತೇಜಸ್‌ ಯುದ್ಧ ವಿಮಾನಗಳನ್ನು ಖರೀದಿಸಲು ವಾಯುಪಡೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಶೇ.51ರಷ್ಟುಯುದ್ಧ ವಿಮಾನಗಳಿಗೆ ಸ್ವದೇಶಿ ನಿರ್ಮಿತ ‘ಉತ್ತಮ್‌’ ರಾಡಾರ್‌ ಅಳವಡಿಕೆಯಾಗಲಿದೆ. ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಎಲ್‌ಆರ್‌ಡಿಇ ಲ್ಯಾಬ್‌ ‘ಉತ್ತಮ್‌’ ರಾಡಾರ್‌ ಅನ್ನು ಅಭಿವೃದ್ಧಿಪಡಿಸಿದೆ. ಪರೀಕ್ಷಾ ಹಂತದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ. ಹೀಗಾಗಿ ಆ ರಾಡಾರ್‌ಗಳ ಅಳವಡಿಕೆ ಸಂಬಂಧ ಎಚ್‌ಎಎಲ್‌ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಡಿಆರ್‌ಡಿಒ ಮುಖ್ಯಸ್ಥ ಸತೀಶ್‌ ರೆಡ್ಡಿ ತಿಳಿಸಿದ್ದಾರೆ.

ಎಚ್‌ಎಎಲ್‌ನಿಂದ 123 ತೇಜಸ್‌ ಯುದ್ಧ ವಿಮಾನಗಳನ್ನು ವಾಯುಪಡೆಗೆ ಖರೀದಿಸಲಾಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 40 ವಿಮಾನಗಳು ಹಸ್ತಾಂತರವಾಗಲಿವೆ. ಅವಕ್ಕೆ ಹಾಗೂ ಉಳಿಕೆ 83 ವಿಮಾನಗಳ ಪೈಕಿ 20ಕ್ಕೆ ಇಸ್ರೇಲ್‌ ರಾಡಾರ್‌ಗಳನ್ನೇ ಅಳವಡಿಸಲಾಗುತ್ತದೆ. ಉಳಿದ 63 ವಿಮಾನಗಳಿಗೆ ಉತ್ತಮ್‌ ರಾಡಾರ್‌ ಜೋಡಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಉತ್ತಮ್‌ ರಾಡಾರ್‌ಗಳು ಅತ್ಯಾಧುನಿಕವಾಗಿದ್ದು, ಒಂದೇ ಬಾರಿಗೆ ಹಲವು ಗುರಿಗಳನ್ನು ಪತ್ತೆ ಹಚ್ಚುತ್ತವೆ. ಅತ್ಯುತ್ಕೃಷ್ಟದರ್ಜೆಯ ಚಿತ್ರಗಳನ್ನು ಸೆರೆ ಹಿಡಿದು, ಸರ್ವೇಕ್ಷಣೆಗೆ ನೆರವಾಗುತ್ತವೆ. ಶತ್ರು ದೇಶಗಳಿಗೆ ಕೈಗೆ ಯುದ್ಧ ವಿಮಾನಗಳು ಸಿಗುವ ಸಾಧ್ಯತೆಯನ್ನು ಕ್ಷೀಣಿಸುತ್ತವೆ ಎಂದು ವರದಿಗಳು ವಿವರಿಸಿವೆ.