Asianet Suvarna News Asianet Suvarna News

ಮಹಾರಾಷ್ಟ್ರ 50% ಲಾಕ್‌ಡೌನ್: 2ನೇ ದಿನವೂ 25000+ ಮಂದಿಗೆ ಸೋಂಕು!

ಸತತ 2ನೇ ದಿನವೂ 25000+ ಮಂದಿಗೆ ಸೋಂಕು: ನೆರೆರಾಜ್ಯ ತಲ್ಲಣ| ಮಹಾರಾಷ್ಟ್ರ ಶೇ.50 ಲಾಕ್ಡೌನ್‌| ಕೊರೋನಾ ಮಹಾ ಸ್ಫೋಟ ಹಿನ್ನೆಲೆ: ಎಲ್ಲ ಕಚೇರಿ, ಸಿನಿಮಾ, ರಂಗಮಂದಿರ, ಸಭಾಂಗಣಗಳಲ್ಲಿ 50% ಮಿತಿ ಹೇರಿಕೆ| ಮುಂಬೈನಲ್ಲಿ ಮಾಲ್‌ಗಳ ಪ್ರವೇಶಕ್ಕೆ ನೆಗೆಟಿವ್‌ ವರದಿ ಕಡ್ಡಾಯ| ಮದುವೆಗೆ 50, ಅಂತ್ಯಕ್ರಿಯೆಗೆ 20 ಜನರ ಮಿತಿ

50pc Of Maharashtra Under lockdown more than 25000 cases reported pod
Author
Bangalore, First Published Mar 20, 2021, 7:19 AM IST

ಮುಂಬೈ(ಮಾ.20): ಗುರುವಾರ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಲವು ಕ್ರಮಗಳನ್ನು ಘೋಷಿಸಿದೆ. ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ರಂಗಮಂದಿರಗಳು, ಆಡಿಟೋರಿಯಂ, ಕಚೇರಿ ಸ್ಥಳಗಳಲ್ಲಿ ಜನರ ಹಾಜರಿ ಮೇಲೆ ಕೆಲವು ನಿರ್ಬಂಧಗಳನ್ನು ಹೊಸದಾಗಿ ಹೇರಿದೆ. ಇದರೊಂದಿಗೆ ಮಹಾರಾಷ್ಟ್ರ ಪರೋಕ್ಷವಾಗಿ ಮತ್ತೊಂದು ಸೀಮಿತ ಲಾಕ್ಡೌನ್‌ಗೆ ಒಳಪಟ್ಟಂತೆ ಆಗಿದೆ. ರಾಜ್ಯದಲ್ಲಿ ಗುರುವಾರ ಇದುವರೆಗಿನ ದಾಖಲೆಯ 25833 ಪ್ರಕರಣಗಳು ದೃಢಪಟ್ಟಿದ್ದರೆ, ಶುಕ್ರವಾರ 25681 ಪ್ರಕರಣಗಳು ದೃಢಪಟ್ಟಿವೆ.

ಈ ನಡುವೆ ‘ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರದ ಮುಂದೆ ಇರುವ ಆಯ್ಕೆಗಳಲ್ಲಿ ಲಾಕ್‌ಡೌನ್‌ ಕೂಡ ಒಂದು’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಎಚ್ಚರಿಸಿದ್ದಾರೆ. ಶುಕ್ರವಾರ ನಂದೂರ್‌ಬಾರ್‌ನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಮುಂಬರುವ ದಿನಗಳಲ್ಲಿ ಲಾಕ್‌ಡೌನ್‌ ಕೂಡ ನಮ್ಮ ಆಯ್ಕೆ ಆಗಬಹುದು. ಆದರೆ ನಾನು ಜನರನ್ನು ನಂಬುತ್ತೇನೆ. ಈ ಹಿಂದಿನಂತೆ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿ ಲಾಕ್‌ಡೌನ್‌ ಹೇರದಂತೆ ಅವರು ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಶೇ.50ರ ಮಿತಿ:

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ (ಆರೋಗ್ಯ ಮತ್ತು ಅತ್ಯಗತ್ಯ ಸೇವೆ ಹೊರತುಪಡಿಸಿ) ಒಟ್ಟು ಸಾಮರ್ಥ್ಯದ ಶೇ.50ರಷ್ಟುಸಿಬ್ಬಂದಿ ಮಾತ್ರ ಹಾಜರಾಗಬೇಕು. ಉಳಿದವರು ಮನೆಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ನಾಟಕ ಗೃಹಗಳು ಹಾಗೂ ಆಡಿಟೋರಿಯಂಗಳು ಶೇ.50ರಷ್ಟುಸಾಮರ್ಥ್ಯದೊಂದಿಗೆ ಕೆಲಸ ಮಾಡಬೇಕು. ಇವನ್ನು ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಭೆಗಳಿಗೆ ನೀಡುವಂತಿಲ್ಲ. ಒಂದು ವೇಳೆ ನೀಡಿದರೆ ದಂಡ ಹಾಗೂ ಕೋವಿಡ್‌-19 ಹಾವಳಿ ನಿಲ್ಲುವವರೆಗೆ ಇವುಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ.

ಇನ್ನು ಸೋಂಕು ಹೆಚ್ಚಳಕ್ಕೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕಾರಣ ಎಂಬ ವರದಿ ಬೆನ್ನಲ್ಲೇ ರಾಜ್ಯದಲ್ಲಿ ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ.

ವರದಿ ಕಡ್ಡಾಯ:

ಮತ್ತೊಂದೆಡೆ ಮುಂಬೈನ ಮಾಲ್‌ ಹಾಗೂ ಶಾಪಿಂಗ್‌ ಕಾಂಪ್ಲೆಕ್ಸ್‌ಗಳಿಗೆ ಹೋಗಲು ಬಯಸಿದ್ದರೆ ಕೊರೋನಾ ನೆಗೆಟಿವ್‌ ವರದಿ ತೆಗೆದುಕೊಂಡು ಹೋಗುವುದು ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ಮಾಲ್‌ನ ದ್ವಾರದಲ್ಲೇ ಆ್ಯಂಟಿಜೆನ್‌ ಟೆಸ್ಟ್‌ ನಡೆಸಲಾಗುತ್ತದೆ. ವರದಿ ನೆಗೆಟಿವ್‌ ಬಂದರೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗುತ್ತದೆ.

ಜನರ ಮಿತಿ:

ಈಗಾಗಲೇ ಮಾ.15ರಂದು ಹೊರಡಿಸಿರುವ ಆದೇಶದ ಪ್ರಕಾರ, ಮದುವೆ ಹಾಗೂ ಇತರ ಸಮಾರಂಭಗಳಿಗೆ 50 ಜನರು ಮಾತ್ರ ಸೇರಬೇಕು. ಅಂತ್ಯಕ್ರಿಯೆಗೆ 20 ಜನರು ಸೇರಲು ಅವಕಾಶವಿದೆ ಹಾಗೂ ಸಿನಿಮಾ ಮಂದಿರಗಳಿಗೆ ಶೇ.50ರಷ್ಟುಪ್ರೇಕ್ಷಕರ ಭರ್ತಿಗೆ ಅನುಮತಿ ಇದೆ. ಗೋವಾ, ದಿಲ್ಲಿ, ರಾಜಸ್ಥಾನ, ಗುಜರಾತ್‌, ಗೋವಾ ಹಾಗೂ ಕೇರಳದಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

Follow Us:
Download App:
  • android
  • ios