ಮುಸ್ಲಿಂ ವ್ಯಕ್ತಿ ಪಿಎಂ ಆದ್ರೆ ಶೇ.50ರಷ್ಟು ಹಿಂದೂಗಳ ಮತಾಂತರ, ಯತಿ ನರಸಿಂಹಾನಂದರ ವಿವಾದ!
* ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುವ ಯತಿ ನರಸಿಂಹಾನಂದ
* ಮುಸ್ಲಿಂ ಸಮುದಾಯದ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ
* ಮುಸ್ಲಿಂ ವ್ಯಕ್ತಿ ಪಿಎಂ ಆದ್ರೆ ಶೇ.50ರಷ್ಟು ಹಿಂದೂಗಳ ಮತಾಂತರ
ನವದೆಹಲಿ(ಏ.04): ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುವ ದೆಹಲಿಯ ಬಳಿಯ ಗಾಜಿಯಾಬಾದ್‌ನ ದಾಸನಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಭಾನುವಾರ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಒಬ್ಬ ಮುಸ್ಲಿಂ ವ್ಯಕ್ತಿ ದೇಶದ ಪ್ರಧಾನಿಯಾದರೆ 20 ವರ್ಷಗಳಲ್ಲಿ ಶೇ 50ರಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ. ದೆಹಲಿ ಆಡಳಿತದ ಅನುಮತಿಯಿಲ್ಲದೆ ಆಯೋಜಿಸಲಾದ ಹಿಂದೂ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡುವಾಗ, ನರಸಿಂಹಾನಂದರು ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು.
ಇನ್ನು ಇದೇ ಸಂಘಟನೆಯು ಬುರಾರಿ ಮೈದಾನದಲ್ಲಿ ಮಹಾಪಂಚಾಯತ್ ಅನ್ನು ಆಯೋಜಿಸಿತ್ತು ಎಂಬುವುದು ಉಲ್ಲೇಖನೀಯ. ಈ ಹಿಂದೆ ಹರಿದ್ವಾರ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಇದರಲ್ಲಿ.ಅನೇಕ ಗಣ್ಯ ನಾಯಕರು ಭಾಗವಹಿಸಿದ್ದರು. ಹರಿದ್ವಾರ ಘಟನೆಗೆ ಸಂಬಂಧಿಸಿದಂತೆ ನರಸಿಂಹಾನಂದ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿರುವ ಯತಿ ನರಸಿಂಹಾನಂದ್, 2029ರಲ್ಲಿ ಅಥವಾ 2034ರಲ್ಲಿ ಅಥವಾ 2039ರಲ್ಲಿ ಮುಸ್ಲಿಮರೇ ಪ್ರಧಾನಿಯಾಗುತ್ತಾರೆ. ಒಮ್ಮೆ ಮುಸ್ಲಿಂ ಪ್ರಧಾನಿಯಾದರೆ, ಮುಂದಿನ 20 ವರ್ಷಗಳಲ್ಲಿ ಶೇ 50ರಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ, ಶೇ. 40 ರಷ್ಟು ಜನರು ಕೊಲ್ಲಲ್ಪಡುತ್ತಾರೆ ಮತ್ತು ಉಳಿದ ಶೇ10 ರಷ್ಟು ಜನರು ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಬೇರೆ ದೇಶದಲ್ಲಿರುತ್ತಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಾಪಂಚಾಯತ್‌ನ ವೀಡಿಯೋದಲ್ಲಿ ನರಸಿಂಹಾನಂದ ಅವರು ಇದು ಹಿಂದೂಗಳ ಭವಿಷ್ಯ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ನೀವು ಈ ಭವಿಷ್ಯದಿಂದ ತಪ್ಪಿಸಿಕೊಳ್ಳಲು ಬಯಸಿದರೆ, ಮನುಷ್ಯರಾಗಿ ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ. ಹೀಗಿದ್ದರೂ ಈ ವೀಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.
ಏತನ್ಮಧ್ಯೆ, ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದ ದೆಹಲಿಯ ಕೆಲವು ಪತ್ರಕರ್ತರೊಂದಿಗೆ ಅವರು ಅನುಚಿತವಾಗಿ ವರ್ತಿಸಿದ ವರದಿಗಳಿವೆ. ಆದರೆ, ಪೊಲೀಸರು ಅವರ ಬಂಧನದ ಹಕ್ಕನ್ನು ನಿರಾಕರಿಸಿದ್ದಾರೆ. ಈ ಘಟನೆಯನ್ನು ವರದಿ ಮಾಡಿದ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ, ಮಹಾಪಂಚಾಯತ್‌ನಲ್ಲಿ ಹಿಂದೂ ಜನಸಮೂಹವು ಇಬ್ಬರು ಮುಸ್ಲಿಂ ಮಾಧ್ಯಮ ಸದಸ್ಯರ ಮೇಲೆ ಹಲ್ಲೆ ನಡೆಸಿ ಬಂಧಿಸಿದೆ ಎಂದು ಆರೋಪಿಸಿದ್ದಾರೆ.
ಯಾರನ್ನೂ ಬಂಧಿಸಲಾಗಿಲ್ಲ ಎಂದು ವಾಯುವ್ಯ ದೆಹಲಿ ಪೊಲೀಸ್ ಆಯುಕ್ತ ಉಷಾ ರಂಗನಾನಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅವರು ಟ್ವೀಟ್ ಮಾಡಿ, “ಕೆಲವು ವರದಿಗಾರರು ತಮ್ಮ ಉಪಸ್ಥಿತಿಯ ವಿರುದ್ಧ ಪ್ರತಿಭಟನೆಯನ್ನು ತಪ್ಪಿಸಲು ಅಲ್ಲಿರುವ ಪೊಲೀಸ್ ಪಿಸಿಆರ್‌ನಲ್ಲಿ ಸ್ವಯಂಪ್ರೇರಣೆಯಿಂದ ಕುಳಿತುಕೊಂಡರು ಮತ್ತು ಭದ್ರತಾ ಕಾರಣಗಳಿಂದಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲು ನಿರ್ಧರಿಸಿದರು. ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ಅಗತ್ಯ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ.’’ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ‘‘ಸುಳ್ಳು ಮಾಹಿತಿ ಹಬ್ಬಿಸಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.