ದೇಶದಲ್ಲಿ ಕಳೆದ ವರ್ಷ ಕೊರೋನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳಲು ಕಾರಣವಾದ ಆರೋಪ| ‘ತಬ್ಲೀಘಿ ಮಸೀದಿ’ಗೆ 50ರ ಮಿತಿ ಹೇರಿ: ಕೇಂದ್ರ ಸರ್ಕಾರ

ನವದೆಹಲಿ(ಮಾ.25): ದೇಶದಲ್ಲಿ ಕಳೆದ ವರ್ಷ ಕೊರೋನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳಲು ಕಾರಣವಾದ ಆರೋಪ ಹೊತ್ತಿರುವ ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ 50 ಮಂದಿಯ ಪ್ರಾರ್ಥನೆಗಷ್ಟೇ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅಭಿಪ್ರಾಯ ತಿಳಿಸಿದೆ.

ಕಳೆದ ವರ್ಷ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ತಬ್ಲೀಘಿ ಜಮಾತ್‌ ಸಮಾವೇಶ ನಡೆದಿತ್ತು. ಅದರಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾ.31ರಿಂದ ಮಸೀದಿಗೆ ಬೀಗ ಜಡಿಯಲಾಗಿದೆ. ಇದೀಗ ಅಲ್ಲಿ ಮುಂಬರುವ ಹಬ್ಬದ ಸೀಸನ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಿರುವ ಸರ್ಕಾರ, ವಕ್ಫ್ ಮಂಡಳಿ 50 ಮಂದಿಯನ್ನು ಆಯ್ಕೆ ಮಾಡಬೇಕು. ಆ ಪಟ್ಟಿಯನ್ನು ಪೊಲೀಸರಿಗೆ ಸಲ್ಲಿಸಬೇಕು. 50 ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದೆ. ಮುಂದಿನ ವಿಚಾರಣೆ ಏ.12ರಂದು ನಡೆಯಲಿದೆ.