* ಉನ್ನತ ಹುದ್ದೆಗಳಲ್ಲಿ ಒಂದಾದ ಕರ್ನಲ್‌ ಹುದ್ದೆಗೆ ಇದೇ ಮೊದಲ ಬಾರಿ ಐದು ಮಂದಿ ಮಹಿಳಾ ಅಧಿಕಾರಿಗಳಿಗೆ ಬಡ್ತಿ * ಸೇನೆಯಲ್ಲಿ ಇವರು 26 ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಬಡ್ತಿ

ನವದೆಹಲಿ(ಆ.24): ಭಾರತೀಯ ಸೇನಾಪಡೆಯ ಉನ್ನತ ಹುದ್ದೆಗಳಲ್ಲಿ ಒಂದಾದ ಕರ್ನಲ್‌ ಹುದ್ದೆಗೆ ಇದೇ ಮೊದಲ ಬಾರಿ ಐದು ಮಂದಿ ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಸೇನೆಯಲ್ಲಿ ಇವರು 26 ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಬಡ್ತಿ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸೇನಾಪಡೆಯಲ್ಲಿ ಮೆಡಿಕಲ್‌ ಕೋರ್‌, ಜಡ್ಜ್‌ ಅಡ್ವೋಕೇಟ್‌ ಜನರಲ್‌ ಮತ್ತು ಎಜುಕೇಶನ್‌ ಕೋರ್‌ ಹೊರತುಪಡಿಸಿ ಇನ್ನಾವ ವಿಭಾಗದಲ್ಲೂ ಮಹಿಳೆಯರಿಗೆ ಕರ್ನಲ್‌ ಹುದ್ದೆಗೆ ಬಡ್ತಿ ನೀಡುತ್ತಿರಲಿಲ್ಲ. ಇದೇ ಮೊದಲ ಬಾರಿ ಸಿಗ್ನಲ್‌, ಎಲೆಕ್ಟ್ರಾನಿಕ್‌ ಅಂಡ್‌ ಮೆಕ್ಯಾನಿಲ್‌ ಎಂಜಿನಿಯರ್ಸ್‌ ಹಾಗೂ ಎಂಜಿನಿಯರ್ಸ್‌ ವಿಭಾಗದಿಂದ ಲೆ.ಕ.ಸಂಗೀತಾ ಸರ್ದಾನಾ, ಲೆ.ಕ.ಸೋನಿಯಾ ಆನಂದ್‌, ಲೆ.ಕ.ನವನೀತ್‌ ದುಗ್ಗಲ್‌, ಲೆ.ಕ.ರೀನು ಖನ್ನಾ ಹಾಗೂ ಲೆ.ಕ.ರಿಚಾ ಸಾಗರ್‌ ಅವರಿಗೆ ‘ಕರ್ನಲ್‌ ಟೈಮ್‌ ಸ್ಕೇಲ್‌’ ರಾರ‍ಯಂಕ್‌ಗೆ ಬಡ್ತಿ ನೀಡಲಾಗಿದೆ.

ಸೇನಾಪಡೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಪ್ರವೇಶ ಪರೀಕ್ಷೆ ಬರೆಯಲು ಮಹಿಳೆಯರಿಗೆ ಸುಪ್ರೀಂಕೋರ್ಟ್‌ ಇತ್ತೀಚೆಗಷ್ಟೇ ಮಧ್ಯಂತರ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಈಗ ಮಹಿಳೆಯರಿಗೆ ಉನ್ನತ ಹುದ್ದೆಗೆ ಬಡ್ತಿ ದೊರಕಿರುವುದು ವಿಶೇಷವಾಗಿದೆ. ಸೇನೆಯ ವಿವಿಧ ವಿಭಾಗಗಳಲ್ಲಿ ಕೆಲ ವರ್ಷಗಳ ಹಿಂದಿನವರೆಗೆ ಮಹಿಳೆಯರಿಗೆ ಶಾರ್ಟ್‌ ಸವೀರ್‍ಸ್‌ ಕಮಿಷನ್‌ (ಸೀಮಿತ ಅವಧಿಯ ಸೇವೆ)ಗೆ ಮಾತ್ರ ಅವಕಾಶವಿತ್ತು. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ವಿಭಾಗಗಳಲ್ಲೂ ಮಹಿಳೆಯರಿಗೆ ಪರ್ಮನೆಂಟ್‌ ಕಮಿಷನ್‌ (ನಿವೃತ್ತಿಯವರೆಗೆ ಸೇವೆ) ನೀಡಲಾಗುತ್ತಿದೆ. ತನ್ಮೂಲಕ ಮಹಿಳೆಯರಿಗೆ ಸೇನಾಪಡೆಗಳಲ್ಲಿ ಇದ್ದ ಲಿಂಗ ತಾರತಮ್ಯವನ್ನು ನಿವಾರಿಸಲಾಗುತ್ತಿದೆ.