ಕೋಲ್ಕತಾ(ಏ.11): ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದ 4ನೇ ಹಂತದ ಚುನಾವಣೆ ನಡೆಯುವಾಗಲೇ ಶನಿವಾರ ಉದ್ರಿಕ್ತರು ಹಾಗೂ ಕೇಂದ್ರೀಯ ಪಡೆಗಳ ಮಧ್ಯೆ ಕೂಚ್‌ ಬೆಹಾರ್‌ನಲ್ಲಿ ಬಹುದೊಡ್ಡ ಸಂಘರ್ಷ ನಡೆದಿದೆ. ಈ ವೇಳೆ ತಮ್ಮ ಶಸ್ತ್ರಾಸ್ತ್ರ ಕಸಿದು ದಾಳಿಗೆ ಯತ್ನಿಸಿದ ಉದ್ರಿಕ್ತರ ಮೇಲೆ ಪಡೆಗಳು ಗೋಲಿಬಾರ್‌ ನಡೆಸಿದಾಗ ಐವರು ಬಲಿಯಾಗಿದ್ದಾರೆ.

ಎಲ್ಲ ಮೃತರೂ ತನ್ನ ಕಾರ್ಯಕರ್ತರು ಎಂದು ತೃಣಮೂಲ ಕಾಂಗ್ರೆಸ್‌ ಹೇಳಿಕೊಂಡಿದೆ. ಈ ವಿಷಯವು ಪ್ರಧಾನಿ ನರೇಂದ್ರ ಮೋದಿ ಹಾಗೂ ತೃಣಮೂಲ ಅಧಿನಾಯಕಿ ಮಮತಾ ಬ್ಯಾನರ್ಜಿ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.

ಈ ನಡುವೆ, ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದು, ಹಿಂಸೆಗೆ ಟಿಎಂಸಿ ಪ್ರಚೋದಿಸುತ್ತಿದೆ ಎಂದು ದೂರಿದೆ. ಘಟನೆಯ ಬಗ್ಗೆ ಜಿಲ್ಲಾಡಳಿತದಿಂದ ಚುನಾವಣಾ ಆಯೋಗ ವರದಿ ಬಯಸಿದೆ. ಘಟನೆ ನಡೆದ ಮತಗಟ್ಟೆಯಲ್ಲಿನ ಮತದಾನ ಪ್ರಕ್ರಿಯೆಗೆ ಆಯೋಗ ತಡೆ ನೀಡಿದ್ದು, ಮರು ಮತದಾನಕ್ಕೆ ಆದೇಶಿಸಿದೆ. ಮತ್ತೊಂದೆಡೆ ಘಟನೆಯ ಕುರಿತು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಘೋಷಿಸಿ ಸಿಎಂ ಮಮತಾ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.

ಮಮತಾ ಮೇಲೆ ಮೋದಿ ವಾಗ್ದಾಳಿ

ಕೂಚ್‌ ಬೆಹಾರ್‌ನಲ್ಲಿ ನಡೆದಿದ್ದು ದುದದೃಷ್ಟಕರ. 10 ವರ್ಷ ಸುಲಿಗೆ ನಡೆಸಿ ಗೂಂಡಾರಾಜ್ಯ ನಡೆಸಿದ ತಮ್ಮ ಬುಡ ಕುಸಿಯುತ್ತಿದೆ ಎಂದು ಮಮತಾಗೆ ಅರಿವಾಗಿದೆ. ಅದಕ್ಕೆಂದೇ ಜನರ ಹಕ್ಕು ರಕ್ಷಿಸುತ್ತಿರುವ ಭದ್ರತಾ ಪಡೆಗಳ ಮೇಲೆ ತಮ್ಮವರನ್ನು ಮಮತಾ ಛೂ ಬಿಡುತ್ತಿದ್ದಾರೆ. ಯೋಧರನ್ನು ಹೊಡೆಯಿರಿ ಎಂದು ಸೂಚಿಸಿ ಪ್ರಚೋದಿಸುತ್ತಿದ್ದಾರೆ. ವೀರಯೋಧರನ್ನು ನಡೆಸಿಕೊಳ್ಳುವ ರೀತಿಯೇ ಇದು? ತಮ್ಮ ಕುರ್ಚಿ ಜಾರುತ್ತಿದೆ ಎಂಬ ಹತಾಶೆಯಿಂದ ಮಮತಾ ಇಷ್ಟುಕೆಳಮಟ್ಟಕ್ಕೆ ಇಳಿದಿದ್ದಾರೆ. ಆದರೆ, ದೀದಿ ಅವರೇ.. ಈ ದಾಳಿ ನಿಮ್ಮನ್ನು ರಕ್ಷಿಸಲ್ಲ. ನಿಮ್ಮ ಪತನ ಖಚಿತ

ಮೋದಿಗೆ ಮಮತಾ ತಿರುಗೇಟು

ಕೂಚ್‌ ಬೆಹಾರ್‌ನಲ್ಲಿ ನಿರಪರಾಧಿಗಳನ್ನು ಕೊಲ್ಲಲಾಗಿದೆ. ಇದು ಕಂಡು ಕೇಳರಿಯದ ಘಟನೆ. ಇದರ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಬೇಕು. ಸೋಲಿನ ಭೀತಿಯಿಂದ ಬಿಜೆಪಿ ಕೇಂದ್ರೀಯ ಪಡೆಗಳನ್ನು ಬಳಸಿಕೊಂಡು ನಿಷ್ಪಾಪಿಗಳ ಮೇಲೆ ದಾಳಿ ನಡೆಸಬಹುದು ಎಂದು ಮೊದಲೇ ಅಂದಾಜಿಸಿದ್ದೆ. ಇದು ಈಗ ನಿಜವಾಗಿದೆ. ಆದರೆ ನಾವು ಸುಮ್ಮನೇ ಕೂಡದೇ ಭಾನುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ತಮ್ಮ ವಿರುದ್ಧ ಸಂಚು ನಡೆಸಿರುವ ಬಿಜೆಪಿಗೆ ರಾಜ್ಯದ ಜನ ಪಾಠ ಕಲಿಸಲಿದ್ದಾರೆ.

ಆಗಿದ್ದೇನು?:

ಕೂಚ್‌ ಬೆಹಾರ್‌ನ ಸೀತಾಲ್‌ಕುಚಿ ಎಂಬಲ್ಲಿನ ಮತಗಟ್ಟೆನಂ.126/5ರಲ್ಲಿ ಬೆಳಗ್ಗೆ 9.35ಕ್ಕೆ 50-60 ಜನ ದುಷ್ಕರ್ಮಿಗಳ ಗುಂಪು, ಮತದಾರರನ್ನು ಮತಗಟ್ಟೆಗೆ ತೆರಳುವುದನ್ನು ಕಲ್ಲು ಎಸೆವುದರ ಮೂಲಕ ತಡೆಗಟ್ಟುತ್ತಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌), ಈ ಉದ್ರಿಕ್ತರ ಕೃತ್ಯಕ್ಕೆ ತಡೆ ಹಾಕಲು ಯತ್ನಿಸಿತು. ಆಗ ಸಿಐಎಸ್‌ಎಫ್‌ ಅಧಿಕಾರಿ ಸುನೀಲ್‌ ಕುಮಾರ್‌ ಮೇಲೆ ಉದ್ರಿಕ್ತರು ಮೊದಲು ದಾಳಿ ನಡೆಸಿದರು.

ಈ ವೇಳೆ ಭಾರೀ ಗೊಂದಲ ಏರ್ಪಟ್ಟು ಮಗುವೊಂದು ಬಿತ್ತು. ಆಗ ಉದ್ರಿಕ್ತರು ಮತ್ತಷ್ಟುಕೋಪಗೊಂಡು ಸಿಐಎಸ್‌ಎಫ್‌ ವಾಹನಗಳನ್ನು ಧ್ವಂಸಗೊಳಿಸಿದರು ಹಾಗೂ ಯೋಧರ ಮೇಲೆ ಭಾರೀ ದಾಳಿ ಮಾಡಿದರು.

ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಆತ್ಮರಕ್ಷಣೆಗೆಂದು ಸಿಐಎಸ್‌ಎಫ್‌ ಸಿಬ್ಬಂದಿ 6 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಅಧಿಕಾರಿಯೊಬ್ಬರು ಬಂದು ಪರಿಸ್ಥಿತಿ ತಿಳಿಗೆ ಯತ್ನಿಸಿದರು. 1 ತಾಸಿನ ಬಳಿಕ 150 ಜನ ಉದ್ರಿಕ್ತರು, ಮತಗಟ್ಟೆಗೆ ಬಂದು ಚುನಾವಣಾ ಸಿಬ್ಬಂದಿಯನ್ನು ಥಳಿಸಿದರು. ಅಲ್ಲಿದ್ದ ಯೋಧರ ಬಂದೂಕು ಕಿತ್ತುಕೊಳ್ಳಲು ಯತ್ನಿಸಿದರು.

ಆಗ ಮತ್ತೆ ಸಿಐಎಸ್‌ಎಫ್‌ ಯೋಧರು ಮೊದಲು 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೆ ಉದ್ರಿಕ್ತರು ಹೆದರದೇ ಮತ್ತಷ್ಟುದಾಳಿ ನಡೆಸಿದರು. ಈ ವೇಳೆ ಅನಿವಾರ್ಯವಾಗಿ ಸಿಐಎಸ್‌ಎಫ್‌ನವರು 7 ಸುತ್ತು ಗುಂಡುಗಳನ್ನು ನೇರವಾಗಿ ಉದ್ರಿಕ್ತರ ಮೇಲೆ ಹಾರಿಸಿದರು ಎಂದು ಸಿಐಎಸ್‌ಎಫ್‌ ಹೇಳಿಕೆ ತಿಳಿಸಿದೆ.