ನವದೆಹಲಿ(ಡಿ.25): ದೇಶದಲ್ಲಿ ಕೊರೋನಾ ಲಸಿಕೆ ವಿತರಣೆಗೆಂದೇ ‘ಕೋವಿನ್‌’ ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ ರೂಪಿಸಿರುವ ಕೇಂದ್ರ ಸರ್ಕಾರ ಅವುಗಳನ್ನು ಇನ್ನಷ್ಟುಸುಧಾರಣೆ ಮಾಡುವವರಿಗೆ 40 ಲಕ್ಷ ರು. ಬಹುಮಾನ ಘೋಷಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್‌ ಸಚಿವಾಲಯ ಜಂಟಿಯಾಗಿ ಈ ಸ್ಪರ್ಧೆ ಆಯೋಜಿಸಿವೆ.

ಕೋವಿಡ್‌ ಲಸಿಕೆಯ ವಿತರಣೆ, ಅವುಗಳ ಸಾಗಣೆ, ಶೇಖರಣೆ, ಕೋಲ್ಡ್‌ ಚೈನ್‌ಗಳ ನಿರ್ವಹಣೆ, ಎಷ್ಟುಲಸಿಕೆ ಲಭ್ಯವಿದೆ, ಎಷ್ಟುಲಸಿಕೆ ಎಲ್ಲೆಲ್ಲಿ ವಿತರಣೆಯಾಗುತ್ತಿದೆ ಎಂಬ ಎಲ್ಲಾ ರೀತಿಯ ಮಾಹಿತಿಯ ಮೇಲೆ ರಿಯಲ್‌-ಟೈಮ್‌ ನಿಗಾವಹಿಸಲು ಕೋವಿಡ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್ (ಕೋವಿನ್‌) ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ.

ಬ್ರಿಟನ್ನಿಂದ ಬಂದ ಸೋಂಕಿತ ಮಹಿಳೆ ದಿಲ್ಲಿಯಿಂದ ಎಸ್ಕೇಪ್‌!

ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಹೆಸರು ಕೂಡ ಇದರಲ್ಲೇ ನೋಂದಣಿಯಾಗುತ್ತಿದೆ. ಆದರೆ, ಈ ವ್ಯವಸ್ಥೆಯನ್ನು ಇನ್ನಷ್ಟುಬಲಪಡಿಸಲು ತಾಂತ್ರಿಕ ಪರಿಣತರು ಸರ್ಕಾರದ ಜೊತೆಗೆ ಕೈಜೋಡಿಸಬಹುದು. ಅರ್ಜಿ ಸಲ್ಲಿಸಿ ಮೊದಲ ಸುತ್ತಿಗೆ ಆಯ್ಕೆಯಾಗುವ 5 ಸ್ಪರ್ಧಿಗಳಿಗೆ ಕೋವಿನ್‌ ಎಪಿಐ ಅನ್ನು ಸರ್ಕಾರ ನೀಡಲಿದೆ.

ಅವರಿಗೆ ತಲಾ 2 ಲಕ್ಷ ರು. ನೀಡಲಾಗುತ್ತದೆ. ಅವರು ಸೂಚಿಸುವ ಪರಿಹಾರಗಳನ್ನು ಆಧರಿಸಿ ಇಬ್ಬರು ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಇಬ್ಬರು ಸೂಚಿಸುವ ಪರಿಹಾರಗಳು ಕೋವಿನ್‌ ವೆಬ್‌ಸೈಟ್‌ನಲ್ಲಿ ಅಂತಿಮವಾಗಿ ಅಳವಡಿಕೆಯಾದರೆ ಮೊದಲಿಗರಿಗೆ 40 ಲಕ್ಷ ರು. ಹಾಗೂ ಎರಡನೆಯವರಿಗೆ 20 ಲಕ್ಷ ರು. ಬಹುಮಾನವನ್ನು ಸರ್ಕಾರ ನೀಡಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.