ನವದೆಹಲಿ(ಏ.24): ಗುರುವಾರ ಭಾರತದಲ್ಲಿ ವಿಶ್ವದಾಖಲೆ ಸೃಷ್ಟಿಸಿದ್ದ ಕೊರೋನಾ ವೈರಸ್‌ ಸ್ಫೋಟ ಮುಂದುವರೆದಿದ್ದು, ಸತತ 3ನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಶುಕ್ರವಾರ ಒಂದೇ ದಿನ ರಾತ್ರಿಯವರೆಗೆ 3,54,786 ಪ್ರಕರಣಗಳು ದಾಖಲಾಗಿವೆ.

ಗುರುವಾರ 3.14 ಲಕ್ಷ ಹಾಗೂ ಶುಕ್ರವಾರ 3.32 ಲಕ್ಷ ಪ್ರಕರಣ ವರದಿಯಾಗಿದ್ದವು. ಇನ್ನು ಒಂದೇ ದಿನ 2263 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದ ಮಟ್ಟಿಗೆ ಇದೂ ಕೂಡ ಒಂದು ದಾಖಲೆ.

ಹೊಸ ಪ್ರಕರಣಗಳೊಂದಿಗೆ ಸಕ್ರಿಯ ಸೋಂಕಿನ ಪ್ರಮಾಣ 24.28 ಲಕ್ಷಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ 83.92ಕ್ಕೆ ಕುಸಿದಿದೆ.

9 ರಾಜ್ಯಗಳಲ್ಲಿ 75% ಸೋಂಕು:

ಶುಕ್ರವಾರ ಪತ್ತೆಯಾಗಿರುವ ಹೊಸ ಪ್ರಕರಣಗಳ ಪೈಕಿ ಶೇ.75ರಷ್ಟುಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಛತ್ತೀಸ್‌ಗಢ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್‌ ಮತ್ತು ರಾಜಸ್ಥಾನ ಈ 9 ರಾಜ್ಯಗಳಲ್ಲಿ ಪತ್ತೆಯಾಗಿದೆ. ಇನ್ನು ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.59.12ರಷ್ಟುಕೇಸುಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಪ್ರದೇಶ, ಕರ್ನಾಟಕ ಮತ್ತು ಕೇರಳ ಈ 5 ರಾಜ್ಯಗಳಲ್ಲಿಯೇ ಇವೆ.

ಹಾಗೆಯೇ ಶುಕ್ರವಾರ ಸೋಂಕಿಗೆ ಬಲಿಯಾದವರ ಪೈಕಿ ಶೇ.81.79ರಷ್ಟುಕೇವಲ 9 ರಾಜ್ಯಗಳಲ್ಲಿ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 568, ದೆಹಲಿಯಲ್ಲಿ 306, ಛತ್ತೀಸ್‌ಗಢದಲ್ಲಿ 207, ಉತ್ತರ ಪ್ರದೇಶದಲ್ಲಿ 195, ಕರ್ನಾಟಕದಲ್ಲಿ 106 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.