ನವದೆಹಲಿ(ಮೇ.10): ಶನಿವಾರ ದೇಶಾದ್ಯಂತ 3413 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 112 ಜನ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 62513ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ 2016ಕ್ಕೆ ತಲುಪಿದೆ. 2020ರ ಜ.30ರಂದು ಕೇರಳದಲ್ಲಿ ಮೊದಲಿಗೆ ಕಾಣಿಸಿಕೊಂಡು, ಮಾ.12ರಂದು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿದ್ದ ಕೊರೋನಾ ಸೋಂಕು, ನಂತರದ 58 ದಿನಗಳಲ್ಲಿ 2000ನೇ ಬಲಿ ಪಡೆದಂತೆ ಆಗಿದೆ.

ಈ ನಡುವೆ 1875 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುವ ಮೂಲಕ, ಕೊರೋನಾ ಗೆಲ್ಲುವುದು ಅಸಾಧ್ಯವೇನಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ವಂದೇ ಭಾರತ್‌ ಕಾರ್ಯಾಚರಣೆ: ದುಬೈನಿಂದ ಬಂದವರಿಗೆ ಸೋಂಕು!

ದೇಶದಲ್ಲೇ ಅತಿ ಹೆಚ್ಚು ಸೋಂಕಿತರು ಮತ್ತು ಸಾವು ಕಂಡುಬಂದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಶನಿವಾರವೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಶನಿವಾರ 1165 ಹೊಸ ಸೋಂಕು ಪ್ರಕರಣಗಳೊಂದಿಗೆ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 20,228ಕ್ಕೆ ಏರಿದೆ. 48 ರೋಗಿಗಳು ಮರಣ ಹೊಂದುವ ಮೂಲಕ ಈ ವ್ಯಾಧಿಗೆ ಸಾವಿಗೀಡಾದವರ ಸಂಖ್ಯೆ 779ಕ್ಕೆ ಜಿಗಿದಿದೆ.

ಇನ್ನು ತಮಿಳುನಾಡಿನಲ್ಲಿ 526, ಗುಜರಾತ್‌ನಲ್ಲಿ 394, ರಾಜಸ್ಥಾನದಲ್ಲಿ 129, ಮಧ್ಯಪ್ರದೇಶದಲ್ಲಿ 116 ಹಾಗೂ ಪಶ್ಚಿಮ ಬಂಗಾಳದಲ್ಲಿ 108 ಅತಿಹೆಚ್ಚು ಕೊರೋನಾ ಪ್ರಕರಣಗಳು ದಾಖಲಾದ ರಾಜ್ಯಗಳಾಗಿವೆ.

ಸೋಂಕಿತೆ ಸಾವು ಬಚ್ಚಿಟ್ಟ ಖಾಸಗಿ ಆಸ್ಪತ್ರೆ ಈಗ ಸೀಲ್‌ಡೌನ್!

ಅತಿ ಹೆಚ್ಚು ಸಾವು: ಈವರೆಗೆ ಅತಿ ಹೆಚ್ಚು ಸಾವು ದಾಖಲಾದ ರಾಜ್ಯಗಳೆಂದರೆ ಮಹಾರಾಷ್ಟ್ರ 779, ಗುಜರಾತ್‌ 472, ಮಧ್ಯಪ್ರದೇಶ 311, ಪ.ಬಂಗಾಳ 171, ರಾಜಸ್ಥಾನ 106.