ನವದೆಹಲಿ(ನ.08): ಜನವರಿ ಅಥವಾ ಫೆಬ್ರವರಿಯಲ್ಲಿ ದೇಶಕ್ಕೆ ಮೊದಲ ಕೊರೋನಾ ಲಸಿಕೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಗರಿಗೆದರಿರುವಾಗಲೇ, ಮೊದಲ ಹಂತದಲ್ಲಿ ಉಚಿತವಾಗಿ ಲಸಿಕೆ ಪಡೆಯಲಿರುವ 30 ಕೋಟಿ ಸಂಭವನೀಯರ ಪಟ್ಟಿತಯಾರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಅಂತಿಮ ಹಂತಕ್ಕೆ ಕೊಂಡೊಯ್ದಿದೆ. ಈ ಕುರಿತಾದ ನೀಲನಕ್ಷೆಯನ್ನು ಕೇಂದ್ರ ಸರ್ಕಾರದ ತಜ್ಞರ ತಂಡ ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ ಲಸಿಕೆ ಪಡೆಯುವವರಲ್ಲಿ ವೈದ್ಯರ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಸಿಕೆ ಪಡೆಯುವವರ ಮೇಲೆ ನಿಗಾ ಇಡಲು ಆಧಾರ್‌ ಸಂಖ್ಯೆಯನ್ನು ಬಳಸಿಕೊಳ್ಳುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆಯಾದರೂ, ಅದನ್ನು ಕಡ್ಡಾಯ ಮಾಡುವುದಿಲ್ಲ. ಬದಲಿಗೆ ಸರ್ಕಾರ ನೀಡಿರುವ ಯಾವುದಾದರೂ ಫೋಟೋ ಗುರುತಿನ ಚೀಟಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಯಾರಿಗೆಲ್ಲಾ ಸಿಗಲಿದೆ ಲಸಿಕೆ?:

1 ಕೋಟಿಯಷ್ಟುವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, 2 ಕೋಟಿಯಷ್ಟುಪೌರ ಕಾರ್ಮಿಕರು, ಪೊಲೀಸ್‌ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಯ ಸಿಬ್ಬಂದಿಗೆ ಮೊದಲು ಲಸಿಕೆ ಲಭ್ಯವಾಗಲಿದೆ. 50 ವರ್ಷ ಮೇಲ್ಪಟ್ಟಜನರಲ್ಲಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿರುವ ಕಾರಣ ಅವರು ಆದ್ಯತೆಯ ಪಟ್ಟಿಯಲ್ಲಿದ್ದು, ಆ ವಯೋಮಾನದ 26 ಕೋಟಿ ಜನರಿಗೆ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. 50 ವರ್ಷದೊಳಗಿರುವ, ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 1 ಕೋಟಿ ಮಂದಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿಯ ಕೋವ್ಯಾಕ್ಸಿನ್‌ ಲಸಿಕೆಯು 3ನೇ ಹಂತದ ಪ್ರಯೋಗ ಮುಕ್ತಾಯಗೊಳಿಸಿ ಜೂನ್‌ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ತುರ್ತು ಅಗತ್ಯಬಿದ್ದರೆ ಜನವರಿ- ಫೆಬ್ರವರಿಯಲ್ಲೇ ಲಸಿಕೆ ಬಿಡುಗಡೆ ಸಾಧ್ಯವಿದೆ ಎಂದು ಇತ್ತೀಚೆಗೆ ಐಸಿಎಂಆರ್‌ನ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದರು. ಮತ್ತೊಂದೆಡೆ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಸಿದ್ಧಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಕೂಡ ಅಗತ್ಯ ಬಿದ್ದರೆ ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡಬಹುದು ಎಂದು ಭಾರತದಲ್ಲಿ ಲಸಿಕೆ ಪ್ರಯೋಗ ಮತ್ತು ಉತ್ಪಾದನೆಯ ಹಕ್ಕು ಪಡೆದಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ನ ಸಿಇಒ ಅದರ್‌ ಪೂನಾವಾಲಾ ಇತ್ತೀಚೆಗೆ ಹೇಳಿದ್ದರು.

ಯಾರಾರ‍ಯರಿಗೆ ಆದ್ಯತೆ?

1. 1 ಕೋಟಿ ಆರೋಗ್ಯ ಸಿಬ್ಬಂದಿ: ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು

2. 2 ಕೋಟಿ ಮುಂಚೂಣಿ ಕಾರ್ಯಕರ್ತರು: ಪೌರ ಕಾರ್ಮಿಕರು, ಪೊಲೀಸ್‌ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಯ ಸಿಬ್ಬಂದಿ

3. 26 ಕೋಟಿ ಜನ ನಾಗರಿಕರು: 50 ವರ್ಷ ಮೇಲ್ಪಟ್ಟಜನರಲ್ಲಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿರುವ ಕಾರಣ ಅವರಿಗೂ ಆದ್ಯತೆ

4. 1 ಕೋಟಿ ವಿಶೇಷ ವರ್ಗದ ಜನ: 50 ವರ್ಷ ಕೆಳಗಿನ, ಆದರೆ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು