ನವದೆಹಲಿ[ಡಿ.19]: ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಒಂದೇ ವರ್ಷ ಕೋರ್ಸ್‌ ಮುಗಿಸಿದ್ದ ಮೂವರು ಮಾಜಿ ವಿದ್ಯಾರ್ಥಿಗಳು ಈಗ ಭೂಸೇನೆ, ವಾಯು ಸೇನೆ ಮತ್ತು ನೌಕಾ ಪಡೆಯ ಮುಖ್ಯಸ್ಥರಾಗುತ್ತಿದ್ದಾರೆ.

ಡಿ.31ರಂದು ಜ| ಬಿಪಿನ್‌ ರಾವತ್‌ ಅವರ ನಿವೃತ್ತಿಯ ಬಳಿಕ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಮುಕುಂದ್‌ ನರವಾನೆ ಅವರು ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಹೀಗಾಗಿ ಅವರು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಸಹಪಾಠಿಗಳಾದ ಆಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಮತ್ತು ಏರ್‌ ಚೀಫ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಅವರನ್ನು ಸೇರಿಕೊಳ್ಳಲಿದ್ದಾರೆ.

ಈ ಮೂವರು 1980ರ ಜೂನ್‌- ಜುಲೈನಲ್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ 56ನೇ ಬ್ಯಾಚಿನ ಕೋರ್ಸ್‌ ಅನ್ನು ಮುಕ್ತಾಯಗೊಳಿಸಿದ್ದರು. ವಿದ್ಯಾರ್ಥಿಗಳಾಗಿದ್ದ ವೇಳೆ ಕರಮ್‌ಬೀರ್‌ ಅವರನ್ನು ಕೆಬಿ ಎಂತಲೂ, ರಾಕೇಶ್‌ ಅವರನ್ನು ಚೋಟೂ ಎಂತಲೂ, ಮನೋಜ್‌ ಮುಕುಂದ್‌ ನರವಾನೆ ಅವರನ್ನು ಮನೋಜ್‌ ಎಂತಲೂ ಕರೆಯಲಾಗುತ್ತಿತ್ತು.

ಈ ರೀತಿ ಮೂರು ಸೇನೆಯ ಮುಖ್ಯಸ್ಥರು ಒಂದೇ ಬಾರಿಗೆ ಕೋರ್ಸ್‌ ಮುಗಿಸಿದ್ದು ತೀರಾ ಅಪರೂಪ. ಈ ಹಿಂದೆ 1991ರಲ್ಲಿ ಮೂರು ಸೇನಾ ಮುಖ್ಯಸ್ಥರಾಗಿದ್ದ ಜ| ಎಸ್‌ಎಫ್‌ ರೋಡ್ರಿಗ್ಸ್‌, ಅಡ್ಮಿರಲ್‌ ಎಲ್‌. ರಾಮದಾಸ್‌ ಮತ್ತು ಏರ್‌ ಚೀಫ್‌ ಮಾರ್ಷಲ್‌ ಎನ್‌.ಸಿ. ಸೂರಿ ಅವರು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಸಹಪಾಠಿಗಳಾಗಿದ್ದರು.