ಮುಂಬೈ (ಫೆ.20): ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ನ 2ನೇ ಅಲೆ ಏಳುವ ಭೀತಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟುಕಠಿಣ ನಿರ್ಬಂಧಗಳನ್ನು ಶುಕ್ರವಾರದಿಂದ ಜಾರಿಗೊಳಿಸಲಾಗಿದೆ. ನಾಗಪುರದಲ್ಲಿ ಏಕಾಏಕಿ ಕೊರೋನಾ ಪ್ರಕರಣಗಳು ಏರಿರುವ ಕಾರಣ ಹೋಟೆಲ್‌ಗಳಲ್ಲಿ ಹಾಗೂ ಸಮಾರಂಭ ಸ್ಥಳಗಳಲ್ಲಿ ಶೇ.50ರಷ್ಟುಮಾತ್ರ ಜನರನ್ನು ಸೇರಿಸಬೇಕು. ಅಂತ್ಯಕ್ರಿಯೆಗೆ 20 ಜನರು ಮಾತ್ರ ಸೇರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

ಇನ್ನೊಂದೆಡೆ 5ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾದರೆ ಅಂಥ ಕಟ್ಟಡಗಳನ್ನು ಸೀಲ್‌ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ. ನಾಗಪುರದಲ್ಲಿ ಗುರುವಾರ ಒಂದೇ ದಿನ 644 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, ನಗರವನ್ನು ಆತಂಕಕ್ಕೆ ಸಿಕ್ಕಿಸಿದೆ. ಹೀಗಾಗಿ ಈ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗುರುವಾರವಷ್ಟೇ ಹೊಸ ತಳಿಯ ಕೊರೋನಾ ಕಂಡುಬಂದಿದೆ ಎನ್ನಲಾದ ಅಕೋಲಾ ಹಾಗೂ ಅಮರಾವತಿಯಲ್ಲಿ ಲಾಕ್‌ಡೌನ್‌ ಘೋಷಿಸಲಾಗಿತ್ತು.

ನಿರ್ದಿಷ್ಟ ಪ್ರದೇಶಗಳಲ್ಲೇ ಕೊರೊನಾ ಹೆಚ್ಚಾಗುತ್ತಿರುವುದೇಕೆ.? ...

ಪಾರ್ಟಿ ಮಾಡಿದ್ದಕ್ಕೆ 500 ಜನರ ಮೇಲೆ ಕೇಸ್‌:  ಥಾಣೆ: ಮುಂಬೈ ಸನಿಹದ ಥಾಣೆ ಜಿಲ್ಲೆಯ ಡೊಂಬಿವಿಲಿಯಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಜನ್ಮದಿನಾಚರಣೆ ಮಾಡುತ್ತಿದ್ದ 500 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಡೊಂಬಿವಿಲಿಯಲ್ಲಿ ಮಾಸ್ಕ್‌ ಕೂಡ ಹಾಕದೇ ಹಾಗೂ ಸಾಮಾಜಿಕ ಅಂತರ ಕಾಯದೇ ಇವರು ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜನರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಇವರ ಮೇಲೆ ಕೇಸು ದಾಖಲಿಸಿದ್ದಾರೆ.

ಕೇವಲ ಮಾಸ್ಕ್‌ ಮಾತ್ರ ನಮ್ಮ ರಕ್ಷಕ: ಠಾಕ್ರೆ 

ಪುಣೆ: ರಾಜ್ಯದಲ್ಲಿ ಕೊರೋನಾ ಪ್ರಕರಣ ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಪುನಃ ಆತಂಕ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಛತ್ರಪತಿ ಶಿವಾಜಿ ಮಹಾರಾಜರು ಇದ್ದಾಗ ಖಡ್ಗ ಹಾಗೂ ಗುರಾಣಿ ಹಿಡಿದು ಹೋರಾಡುತ್ತಿದ್ದರು. ಆದರೆ ಇಂದು ಕೊರೋನಾ ವಿರುದ್ಧದ ಯುದ್ಧದಲ್ಲಿ ಹೋರಾಡಲು ಮಾಸ್ಕ್‌ ಮಾತ್ರ ನಮ್ಮ ಗುರಾಣಿ’ ಎಂದು ಹೇಳಿದ್ದಾರೆ. ಇದೇ ವೇಳೆ ಅಗತ್ಯಬಿದ್ದರೆ ಜಿಲ್ಲಾಮಟ್ಟದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಲಾಕ್ಡೌನ್‌ ಜಾರಿಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ.