ಆಮ್ಲಜನಕ ಕೊರತೆಗೆ ಮತ್ತೆ 26 ಬಲಿ| ದೆಹಲಿಯಲ್ಲಿ 20 ಮಂದಿ, ಅಮೃತಸರದಲ್ಲಿ 6 ಸಾವು

ನವದೆಹಲಿ/ಅಮೃತಸರ(ಏ.25): ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಅಭಾವ ಮುಂದುವರಿದಿದ್ದು, ದೆಹಲಿಯಲ್ಲಿ 20 ಮಂದಿ ಹಾಗೂ ಪಂಜಾಬಿನ ಅಮೃತಸರದಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ನೈಋುತ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಜೈಪುರ್‌ ಗೋಲ್ಡನ್‌ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಆಮ್ಲಜನಕ ಸಿಲಿಂಡರ್‌ಗಳು ಖಾಲಿಯಾಗಿದ್ದರಿಂದ ರೋಗಿಗಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಕೆ.ಬಲುಜಾ ತಿಳಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ 200 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದೇ ರೀತಿ ಅಮೃತಸರದ ನೀಲಕಂಠ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ 6 ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ಅವರಲ್ಲಿ 5 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ.

ಆಕ್ಸಿಜನ್‌ಗೆ ಹಾಹಾಕಾರ:

ಈ ಮಧ್ಯೆ ದೆಹಲಿಯ ಆಸ್ಪತ್ರೆಗಳಲ್ಲಿ 5ನೇ ದಿನವೂ ಆಮ್ಲಜನಕದ ಅಭಾವ ಮುಂದುವರಿದಿದೆ. ಕೆಲವೇ ಗಂಟೆಗಲ್ಲಿ ಆಮ್ಲಜನಕದ ಸಂಗ್ರಹ ಖಾಲಿ ಆಗುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಸ್ಪತ್ರೆಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿವೆ. ಆಮ್ಲಜನಕ ಕೊರತೆ ನಿವಾರಣೆಗೆ ಪರಿಹಾರ ಕೋರಿ ಮಹಾರಾಜ ಅಗ್ರಸೇನ್‌ ಆಸ್ಪತ್ರೆ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದೆ.