ನವದೆಹಲಿ(ಮೇ.18): ಕೊರೋನಾ ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾದ ನಂತರ ಕೋವಿಶೀಲ್ಡ್‌ ಲಸಿಕೆ ಪಡೆದ 26 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ವರದಿಯಾಗಿವೆ ಎಂದು ಲಸಿಕೆ ಪರಿಣಾಮಗಳ ಅಧ್ಯಯನ ನಡೆಸಿರುವ ಸರ್ಕಾರದ ಸಂಸ್ಥೆ ‘ಎಇಎಫ್‌ಐ’ ಹೇಳಿದೆ.

ದೇಶದಲ್ಲಿ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆ ಪಡೆದ ಬಳಿಕ 23 ಸಾವಿರ ಅಡ್ಡಪರಿಣಾಮ ಪ್ರಕರಣಗಳು ಉಂಟಾಗಿವೆ. ಇವುಗಳಲ್ಲಿ 700 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ ಎಂದು ಅಧ್ಯಯನ ವರದಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

"

ಈ ಪೈಕಿ 498 ಅತಿ ಗಂಭೀರ ಪ್ರಕರಣಗಳ ಗಹನ ಅಧ್ಯಯನ ನಡೆಸಿದಾಗ ಕೋವಿಶೀಲ್ಡ್‌ ಪಡೆದ 26 ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ದೃಢಪಟ್ಟಿದೆ. ಇದು ಪ್ರತಿ 10 ಲಕ್ಷ ಡೋಸ್‌ನಲ್ಲಿ ಶೇ.0.61ನಷ್ಟಾಗಿದೆ ಎಂದು ಅದು ಹೇಳಿದೆ.

ಆದರೆ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಲ್ಲಿ ಯಾರಲ್ಲೂ ರಕ್ತ ಹೆಪ್ಪುಗಟ್ಟುವಿಕೆ ವರದಿ ಆಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಏಪ್ರಿಲ್‌ 27ರವರೆಗೆ ಕೋವಿಶೀಲ್ಡ್‌ನ 13.4 ಕೋಟಿ ಡೋಸ್‌ ನೀಡಲಾಗಿತ್ತು. ವಿಶ್ವದ ಹಲವು ಕಡೆ ಆಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ ಜಂಟಿಯಾಗಿ ಸಿದ್ಧಪಡಿಸಿರುವ ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ವರದಿಯಾಗಿದ್ದವು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona