ನವದೆಹಲಿ[ಫೆ.26]: ವಿಶ್ವದ 30 ಅತ್ಯಂತ ವಾಯು ಮಾಲಿನ್ಯಪೀಡಿತ ನಗರಗಳಲ್ಲಿ ಭಾರತದ 21 ನಗರಗಳಿವೆ ಎಂದು ಹೊಸ ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಇದರಲ್ಲಿ ದಿಲ್ಲಿ ವಿಶ್ವದ ಅತಿ ಹೆಚ್ಚು ಮಾಲಿನ್ಯಪೀಡಿತ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಆದರೆ, ಸಮಾಧಾನದ ವಿಚಾರವೊಂದರಲ್ಲಿ, ಸಮಗ್ರ ಭಾರತದ ರಾಷ್ಟ್ರೀಯ ವಾಯುಮಾಲಿನ್ಯವು 2018-19ರ ನಡುವೆ ಶೇ.20ರಷ್ಟುತಗ್ಗಿದೆ. ಇತ್ತೀಚಿನ ಆರ್ಥಿಕ ಕುಸಿತದ ಕಾರಣ ಉದ್ದಿಮೆಗಳು ಕೆಲಸ ನಿಲ್ಲಿಸಿವೆ. ಇದರಿಂದ ಉದ್ದಿಮೆಗಳು ಹೊರಸೂಸುವ ಮಾಲಿನ್ಯದ ಪ್ರಮಾಣ ತಗ್ಗಿದ್ದು, ಹವಾಮಾನ ಗುಣಮಟ್ಟಸುಧಾರಿಸಿದೆ ಎಂದು ವಿಶ್ಲೇಷಿಸಲಾಗಿದೆ.

‘ಎಕ್ಯುಏರ್‌ ಏರ್‌ ವಿಷುವಲ್‌’ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ 2019ರ ಮಾಲಿನ್ಯಪೀಡಿತ ಅಧ್ಯಯನ ವರದಿಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ ಭಾರತ ಹಾಗೂ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಇಲ್ಲಿನ ಮಾಲಿನ್ಯ ಸೂಚ್ಯಂಕ 110.2 ಇದೆ. ನಂತರದ ಸ್ಥಾಗಳಲ್ಲಿ ಕ್ರಮವಾಗಿ ಚೀನಾದ ಹೋಟಾನ್‌, ಪಾಕಿಸ್ತಾನದ ಗುಜ್ರಾನ್‌ವಾಲಾ, ಫೈಸಲಾಬಾದ್‌ ಹಾಗೂ ದಿಲ್ಲಿ ಇವೆ.

ಮಾಲಿನ್ಯ ರಹಿತ ಊರು 10 ಸೂಚ್ಯಂಕ ಮೀರಿರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಹೀಗಾಗಿ ಇದಕ್ಕೆ ಹೋಲಿಸಿದರೆ ಗಾಜಿಯಾಬಾದ್‌ನ ವಾತಾವರಣ ಗಬ್ಬೆದ್ದು ಹೋಗಿರುವುದು ಸ್ಪಷ್ಟವಾಗುತ್ತದೆ.

ಇನ್ನು ಮಾಲಿನ್ಯ ಪೀಡಿತ ದೇಶಗಳ ಪಟ್ಟಿಗಮನಿಸಿದಾಗ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಇನ್ನು ಹೆಚ್ಚು ಜನಸಾಂದ್ರತೆ ಹೊಂದಿರುವ ಮಾಲಿನ್ಯಪೀಡಿತ ದೇಶಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಮೊದಲ ಸ್ಥಾನ ಪಡೆದಿದೆ.

ಆದರೆ ಇದೇ ವೇಳೆ, ಈ ಹಿಂದೆ ಮಾಲಿನ್ಯ ನಗರಗಳಲ್ಲಿ ಸದಾ ಸ್ಥಾನ ಪಡೆಯುತ್ತಿದ್ದ ಬೀಜಿಂಗ್‌ನ ಸ್ಥಿತಿ ಸುಧಾರಿಸಿದೆ. ಟಾಪ್‌ 200 ಮಾಲಿನ್ಯ ನಗರಗಳ ಪಟ್ಟಿಯಿಂದ ಅದು ಹೊರಬಂದಿದೆ.

ಟಾಪ್‌ 30ರಲ್ಲಿ ಭಾರತದ 21 ಮಲಿನ ನಗರಗಳು:

ಗಾಜಿಯಾಬಾದ್‌, ದಿಲ್ಲಿ, ನೋಯ್ಡಾ, ಗುರುಗ್ರಾಮ, ಗ್ರೇಟರ್‌ ನೋಯ್ಡಾ, ಬಂಧ್ವಾರಿ, ಲಖನೌ, ಬುಲಂದಶಹರ್‌, ಮುಜಫ್ಫರ್‌ನಗರ, ಬಾಗ್‌ಪತ್‌, ಜಿಂದ್‌, ಫೈಸಲಾಬಾದ್‌, ಕೋರಾಪುಟ್‌, ಭಿವಾಂಡಿ, ಪಟನಾ, ಪಲ್ವಾಲ್‌, ಮುಜಫ್ಫರ್‌ಪುರ, ಹಿಸಾರ್‌, ಕಟಿಯಾಲ್‌, ಜೋಧಪುರ ಹಾಗೂ ಮೊರಾದಾಬಾದ್‌.