ಮಹಾಕುಂಭ ಮೇಳ 'ಏಕತೆಯ ಮಹಾಯಜ್ಞ': ಪಿಎಂ ಮೋದಿ ಬಣ್ಣನೆ
ಪ್ರಧಾನಿ ಮೋದಿ ಅವರು ಮಹಾಕುಂಭ ಮೇಳವನ್ನು 'ಏಕತೆಯ ಮಹಾಯಜ್ಞ' ಎಂದು ಬಣ್ಣಿಸಿದ್ದಾರೆ. 5500 ಕೋಟಿ ರು. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾ ಕುಂಭಮೇಳ ನಡೆಯಲಿದೆ.
ಪ್ರಯಾಗ್‌ರಾಜ್ (ಉ.ಪ್ರ.): ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ಮಹಾಕುಂಭ ಮೇಳವನ್ನು ಪ್ರಧಾನಿ ಮೋದಿ ಅವರು ದೇಶದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಹೊಸ ಔನತ್ಯಕ್ಕೇರಿಸುವ ''ಏಕತೆಯ ಮಹಾಯಜ್ಞ'' ಎಂದು ಬಣ್ಣಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ಕುಂಭಮೇಳ ನಿಮಿತ್ತ 5500 ಕೋಟಿ ರು. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾಕುಂಭ ಮೇಳದಲ್ಲಿ ಜಾತಿ ಮತ್ತು ಜನಾಂಗವೆಂಬ ಭೇದಭಾವ ಮಾಯವಾಗುತ್ತದೆ. ಈ ಕುಂಭಮೇಳವು ಏಕತೆಯ ಮಹಾಯಜ್ಞ ಎಂದು ಬಣ್ಣಿಸಿದರು.
ಮುಂದಿನ ವರ್ಷ ಜ.13ರಿಂದ ಫೆ.26ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
5500 ಕೋಟಿ ರು. ಕಾಮಗಾರಿ
ಮಹಾಕುಂಭ ಮೇಳವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ 5500 ಕೋಟಿ ರು. ವೆಚ್ಟದ 167 ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಇದರ ಜತೆಗೆ, ಭಾರಧ್ವಜ ಆಶ್ರಮ ಕಾರಿಡಾರ್, ಶೃಂಗವೇರ್ಪುರ್ ಧಾಮ ಕಾರಿಡಾರ್, ಅಕ್ಷಯ್‌ವಟ್ ಕಾರಿಡಾರ್ ಮತ್ತು ಹನುಮಾನ್ ಮಂದಿರ್ ಕಾರಿಡಾರ್‌ಗಳಿಗೂ ಮೋದಿಯಿಂದ ಚಾಲನೆ ಪಡೆಯಿತು.
ಇದನ್ನೂ ಓದಿ: ಪ್ರಯಾಗ್‌ರಾಜ್ ಮಹಾಕುಂಭ: ಹೈಟೆಕ್ ಕಂಟ್ರೋಲ್ ರೂಮ್‌ಗೆ ಯೋಗಿ ಸರ್ಕಾರದ ಪ್ಲಾನ್?
ಚಾಟ್‌ಬಾಟ್‌ಗೆ ಚಾಲನೆ
ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಭಕ್ತರ ಜತೆ ಸುಲಭವಾಗಿ ಸಂವಹನ ಸಾಧ್ಯವಾಗುವಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತವಾಗಿ ರೂಪಿಸಲಾಗಿರುವ ಮಹಾಕುಂಭ ‘ಸಹಾ ಯಕ್’ (Sah''AI''yak) ಚಾಟ್‌ಬಾಟ್ ಅನ್ನೂ ಇದೇ ಸಂದರ್ಭದಲ್ಲಿ ಮೋದಿ ಅವರು ಲೋಕಾರ್ಪಣೆ ಮಾಡಿದರು.
ನದಿಯಲ್ಲಿ ವಿಹಾರ:
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಸಂಗಮದಲ್ಲಿ ಆಯೋಜಿಸಿದ್ದ ಪೂಜೆಯಲ್ಲಿ ಮೋದಿ ಪಾಲ್ಗೊಂಡರು. ಇದಕ್ಕೂ ಮುನ್ನ ನದಿಯಲ್ಲಿ ದೋಣಿ ವಿಹಾರವನ್ನೂ ನಡೆಸಿದರು. ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಸಂದರ್ಭದಲ್ಲಿ ಜತೆಗಿದ್ದರು.
ಇದನ್ನೂ ಓದಿ: ಧೂರಿಯಾಪರ: 5,500 ಎಕರೆ ಕೈಗಾರಿಕಾ ಕೇಂದ್ರವಾಗಿ ಯೋಗಿ ಸರ್ಕಾರ ರೂಪಾಂತರ!