ನವದೆಹಲಿ(ಫೆ.08): ಭಾನುವಾರ ಉತ್ತರಾಖಂಡದಲ್ಲಿ ನಡೆದ ಘಟನೆಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ, 2019ರಲ್ಲಿ ಪ್ರಕಟವಾದ ವರದಿಯೊಂದು ಇಂಥ ಘಟನೆಗಳು ಮುಂದಿನ ದಿನಗಳಲ್ಲಿ ಸಾಮಾನ್ಯವಾಗುವ ಕುರಿತು ಎಚ್ಚರಿಕೆಯನ್ನು ನೀಡಿತ್ತು.

ಭಾರತ, ಚೀನಾ, ನೇಪಾಳ ಮತ್ತು ಭೂತಾನ್‌ನ ವ್ಯಾಪ್ತಿಯ ಹಿಮಾಲಯದ ಈ ಹಿಂದಿನ 40 ವರ್ಷಗಳ ಉಪಗ್ರಹ ಚಿತ್ರ ಆಧರಿಸಿ, ಪ್ರದೇಶದಲ್ಲಿ ಜಾಗತಿಕ ಹವಾಮಾನ ಏರಿಕೆಯ ಪರಿಣಾಮಗಳ ಬಗ್ಗೆ ಜರ್ನಲ್‌ ಸೈನ್ಸ್‌ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ಜಾಗತಿಕ ಹವಾಮಾನ ಏರಿಕೆಯು ಹೇಗೆ ಹಿಮಾಲಯವನ್ನು ಆಪೋಷನ ತೆಗೆದುಕೊಳ್ಳುತ್ತಿವೆ. ಈ ಶತಮಾನದ ಆರಂಭದಲ್ಲಿ ಇದ್ದುದಕ್ಕಿಂತ 2 ಪಟ್ಟು ಹೆಚ್ಚು ಪ್ರಮಾಣದಲ್ಲಿ ನೀರ್ಗಲ್ಲುಗಳು ಕರಗುತ್ತಿವೆ ಎಂಬುದನ್ನು ವಿವರಿಸಲಾಗಿತ್ತು.

ಅದರಲ್ಲಿ, ‘1975-2000ರ ಅವಧಿಯಲ್ಲಿ ಹಿಮಕುಸಿತ ಎಷ್ಟುಪ್ರಮಾಣದಲ್ಲಿ ನಡೆಯುತ್ತಿತ್ತೋ, ಅದಕ್ಕಿಂತ ದ್ವಿಗುಣ ಪ್ರಮಾಣದ ಕುಸಿತ 2000ನೇ ಇಸವಿ ಬಳಿಕ ನಡೆಯುತ್ತಿದೆ. ಕಳೆದ 4 ದಶಕಗಳಲ್ಲಿ ಇಂಥ ಹಿಮಬಂಡಗಳು ತಮ್ಮ ಶೇ.25ರಷ್ಟುಪಾಲನ್ನು ಈ ರೀತಿ ಕುಸಿತದ ಮೂಲಕ ಕಳೆದುಕೊಂಡಿವೆ. ಇದಕ್ಕೆಲ್ಲಾ ಜಾಗತಿಕ ತಾಪಮಾನ ಏರಿಕೆಯೇ ಪ್ರಮುಖ ಕಾರಣ’ ಎಂದು ದೂರಲಾಗಿತ್ತು.

ಹಿಮಾಲಯದ ಪೂರ್ವದಿಂದ ಪಶ್ಚಿಮ ಭಾಗದ 2000 ಕಿ.ಮೀ ವ್ಯಾಪ್ತಿಯಲ್ಲಿ ಬರುವ 650 ಗ್ಲೇಷಿಯರ್‌ಗಳ ಉಪಗ್ರಹ ಚಿತ್ರ ಆಧರಿಸಿ ಇಂಥದ್ದೊಂದು ವರದಿಯನ್ನು ತಯಾರಿಸಲಾಗಿತ್ತು. ಈ ಪೈಕಿ ಕೆಲ ಚಿತ್ರಗಳನ್ನು ಅಮೆರಿಕ ಗೂಢಚರ ಉಪಗ್ರಹಗಳು ಸೆರೆಹಿಡಿದ ಚಿತ್ರಗಳು ಬಹಿರಂಗವಾದ ಬಳಿಕ ಬಳಸಿಕೊಳ್ಳಲಾಗಿತ್ತು.

ವರದಿ ಅನ್ವಯ 1975-2000ರ ಅವಧಿಯಲ್ಲಿ ಈ ಗ್ಲೇಷಿಯರ್‌ಗಳು ಪ್ರತಿ ವರ್ಷ 0.25 ಮೀಟರ್‌ನಷ್ಟುಮಂಜುಗಡ್ಡೆಯನ್ನು ಕಳೆದುಕೊಳ್ಳುತ್ತಿದ್ದವು. 1990ರ ಬಳಿಕ ಜಾಗತಿಕ ಮಟ್ಟದಲ್ಲಿ ಹೆಚ್ಚಾದ ತಾಪಮಾನ ಏರಿಕೆಯ ಪರಿಣಾಮಗಳು 2000ನೇ ಇಸವಿಯ ಬಳಿಕ ಗೋಚರವಾಗಲು ಆರಂಭವಾದವು. ಪರಿಣಾಮ ಮಂಜುಗಡ್ಡೆ ಕರಗುವ ವಾರ್ಷಿಕ ಪ್ರಮಾಣ ಅರ್ಧ ಮೀಟರ್‌ಗೆ ಏರಿತ್ತು ಎಂದು ವಿವರಿಸಲಾಗಿತ್ತು.