ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ್ದಕ್ಕೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿದ್ದಾರೆ. ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸುವ ಕಾಂಗ್ರೆಸ್‌ನ ದುಷ್ಟ ಪ್ರಯತ್ನ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯವು ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿದ್ದು, 'ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸುವ ಕಾಂಗ್ರೆಸ್‌ನ ದುಷ್ಟ ಪ್ರಯತ್ನ ವಿಫಲವಾಗಿದೆ' ಎಂದಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ನ್ಯಾಯಾಲಯವು ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪನ್ನು ಸ್ವಾಗತಿಸಿದ್ದಾರೆ.
ಕೇಸರಿ ಭಯೋತ್ಪಾದನೆ ಕಾಂಗ್ರೆಸ್ ದುಷ್ಟ ಪ್ರಯತ್ನ ವಿಫಲ:
ಈ ಪ್ರಕರಣವನ್ನು ಹಿಡಿದು ಕೇಸರಿ ಭಯೋತ್ಪಾದನೆಯನ್ನು ಸೃಷ್ಟಿಸುವ ದುಷ್ಟ ಪ್ರಯತ್ನಕ್ಕೆ ಕೈಹಾಕಿದ್ದ ಕಾಂಗ್ರೆಸ್‌ನ ಪ್ರಯತ್ನ ವಿಫಲವಾದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ. ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು ಶ್ಲಾಘನೀಯ. ಆಗಿನ ಯುಪಿಎ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರಗಳು ಕೇಸರಿ ಭಯೋತ್ಪಾದನೆಯ ಸಿದ್ಧಾಂತವನ್ನು ರೂಪಿಸಿ, ಹಿಂದೂಗಳನ್ನು ಬಂಧಿಸಿ ಅಪರಾಧ ಒಪ್ಪಿಕೊಳ್ಳುವಂತೆ ಒತ್ತಾಯಿಸಿದವು. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಆರಂಭದಿಂದಲೂ ಹಿಂದೂಗಳ ಶತ್ರುಗಳಾಗಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಈ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮಾಲೆಗಾಂವ್ ಸ್ಫೋಟದ ಹಿನ್ನೆಲೆ: 2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 6 ಜನರು ಮೃತಪಟ್ಟಿದ್ದರು ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಾರಾಷ್ಟ್ರ ಎಟಿಎಸ್ ಆರಂಭಿಕ ತನಿಖೆ ನಡೆಸಿತ್ತು, ನಂತರ 2011ರಲ್ಲಿ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಯಿತು. 2016ರಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತು, ಕೆಲವರಿಗೆ ಪುರಾವೆ ಕೊರತೆಯಿಂದ ಬಿಡುಗಡೆ ನೀಡಲಾಗಿತ್ತು. 2025ರ ಏಪ್ರಿಲ್ 19ಕ್ಕೆ ಅಂತಿಮ ವಾದಗಳು ಮುಗಿದು, ಇಂದು ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಮೌರ್ಯ ಅವರು ಕಾಂಗ್ರೆಸ್‌ನ ಈ ಹಿಂದಿನ ಕ್ರಮಗಳನ್ನು ನಾಚಿಕೆಗೇಡಿನ ಕೃತ್ಯ ಎಂದು ಕರೆದಿದ್ದಾರೆ. ಇದೀಗ ಪ್ರಕರಣ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯದ ಈ ತೀರ್ಪು ಕಾಂಗ್ರೆಸ್‌ನ ಷಡ್ಯಂತ್ರವನ್ನು ಬಯಲು ಮಾಡಿದೆ ಎಂದು ಟೀಕಿಸಿದ್ದಾರೆ.
