ಯುದ್ಧ ವಿಮಾನಗಳ ರೋಚಕ ಪ್ರದರ್ಶನಕ್ಕೆ ಜನ ಜಾತ್ರೆ, ಬಾನಂಗಳದಲ್ಲಿ ಸೂರ್ಯಕಿರಣ, ಸಾರಂಗ್ ಅಪೂರ್ವ ಪ್ರದರ್ಶನ ಕಣ್ತುಂಬಿಕೊಂಡ 2 ಲಕ್ಷ ಜನರು, ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮ. ಅರ್ಧ ತಾಸಿಗೂ ಹೆಚ್ಚು ಸಮಯ ಸಾಹಸ ಪ್ರದರ್ಶಿಸಿದ ಸುಖೋಯ್, ಎಫ್-35, ವಿಮಾನ, ಕಾಪ್ಟರ್ ಬಳಿ ಸೆಲ್ಫಿ ಕ್ಲಿಕ್ಕಿಸಿದ ಜನರು.
ಬೆಂಗಳೂರು(ಫೆ.17): ಬಾನಂಗಳದಲ್ಲಿ ಕ್ಷಣ ಕ್ಷಣಕ್ಕೂ ಮೈ ನವಿರೇಳಿಸುತ್ತಿದ್ದ ಸೂರ್ಯಕಿರಣ, ಸಾರಂಗ್‌ನ ರಣರೋಚಕ ಹಾರಾಟಕ್ಕೆ ಶಿಳ್ಳೆ ಚಪ್ಪಾಳೆಯ ‘ವಾಹ್’ ಎಂಬ ಉದ್ಘಾರ. ನೆಲ ನಡುಗುವಂತೆ ಘರ್ಜಿಸುವ ಸುಖೋಯ್, ಎಫ್-35 ಸಾಹಸಕ್ಕೆ ಥ್ರಿಲ್. ಇದರ ಬೆನ್ನಲ್ಲೇ ಅಮೆರಿಕದ ಬ್ಯಾಂಡ್ ಮ್ಯೂಸಿಕ್ ಮೋಡಿಗೆ ಹುಚ್ಚೆದ್ದು ಕುಣಿತ... ಏರೋ ಇಂಡಿಯಾದ ನಾಲ್ಕನೇ ದಿನವಾದ ಗುರುವಾರ ಯಲಹಂಕ ವಾಯುನೆಲೆ ಅಕ್ಷರಶಃ ಜನಜಾತ್ರೆಯಿಂದ ಕಳೆಗಟ್ಟಿತ್ತು.
ಕ್ಷಣಕ್ಷಣಕ್ಕೂ ಮೈ ನವಿರೇಳಿಸುವಂತೆ ಮಾಡಿದ ವೈಮಾನಿಕ ಪ್ರದರ್ಶನಕ್ಕೆ 2 ಲಕ್ಷಕ್ಕೂ ಅಧಿಕ ಜನ ಸಾಕ್ಷಿಯಾದರು. ಆಗಸದಲ್ಲಿ ಬಣ್ಣಬಣ್ಣಗಳ ಚಿತ್ತಾರದೊಂದಿಗೆ ಕಾಪ್ಟರ್‌ಗಳು, ಯುದ್ಧ ವಿಮಾನಗಳು ಮಾಡುತ್ತಿದ್ದ ಅಚ್ಚರಿಯನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಅಮೆರಿಕದ ಎಫ್-35, ಎಫ್-16 ನಭಕ್ಕೇರಿ ಅಬ್ಬರಿಸಿದರೆ, ಭಾರತದ ಸುಖೋಯ್ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಮೈ ರೋಮಾಂಚನಗೊಳಿಸುವಂತೆ ಸಾಹಸ ಪ್ರದರ್ಶಿಸಿತು. ಈ ಮೂರು ಯುದ್ಧ ವಿಮಾನಗಳು ಒಂದರ ನಂತರ ಇನ್ನೊಂದರಂತೆ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ಆಗಸದಲ್ಲಿ ಹಾರಾಡಿದವು.
ಏರೋ ಇಂಡಿಯಾದಲ್ಲಿ ಗಮನಸೆಳೆದ ಬೆಳೆ ರೋಗ ಪತ್ತೆ ಮಾಡಿ ಔಷಧಿ ಸಿಂಪಡಿಸುವ ಕಿಸಾನ್ ಡ್ರೋನ್
ಇವನ್ನು ಮೀರಿಸುವಂತೆ ಪ್ರದರ್ಶನ ನೀಡಿದ್ದು ಸೂರ್ಯಕಿರಣ ಏರೋಬಾಟಿಕ್ ತಂಡ. ಇವುಗಳ ಸಾಹಸ ನೋಡಲೆಂದೇ ಆಗಮಿಸಿದ್ದವರಿಗೆ ನಿರೀಕ್ಷೆ ಮೀರಿ ನಿಬ್ಬೆರಗಾಗುವಂತೆ ಮಾಡಿತು. ಕ್ರಾಸ್ ಲೇವಲ್, ತ್ರಿಷೂಲ್, ರಿಂಗ್, ನಿಶಾನ್, ಸಿಂಗಲ್ ಶೋ, ದಿಲ್, ಸೇರಿ ಹಲವು ಫಾರ್ಮೆಶನ್‌ಗಳ ಮೂಲಕ ಸೂರ್ಯಕಿರಣ ಅಪೂರ್ವ ಪ್ರದರ್ಶನ ನೋಡಿತು. ಇವು ಆಗಸದಲ್ಲಿದ್ದಷ್ಟುಹೊತ್ತೂ ಜನ ಕತ್ತು ಕೆಳಗಿಳಿಸಲಿಲ್ಲ. ಆಗಸಕ್ಕೇರಿದ ಸಾರಂಗ್ ಕೂಡ ಅದ್ಧೂರಿ ಶೋ ಮೂಲಕ ಕರತಾಡನಕ್ಕೆ ಭಾಜನವಾಯಿತು. ಉಳಿದಂತೆ ಎಚ್‌ಎಎಲ್ ನಿರ್ಮಿತ ತೇಜಸ್ ಜೆಟ್, ಎಲ್‌ಸಿಎಚ್, ಎಲ್‌ಯುಎಚ್ ಹೆಲಿಕಾಪ್ಟರ್‌ಗಳು ತಮ್ಮ ಸಾಮರ್ಥ್ಯವನ್ನು ತೋರಿದವು. ಹಾರ್ವರ್ಡ್, ಡಕೋಟಾ ಕೂಡ ನೀಲಾಕಾಶದಲ್ಲಿ ಛಾಪು ಒತ್ತಿದವು.
2 ಲಕ್ಷಕ್ಕೂ ಅಧಿಕ ಜನ
ಗುರುವಾರ 2 ಲಕ್ಷಕ್ಕೂ ಹೆಚ್ಚಿನ ಜನ ವಾಯುನೆಲೆಯಲ್ಲಿ ಏರ್ ಶೋ ವೀಕ್ಷಿಸಿರುವುದಾಗಿ ರಕ್ಷಣಾ ಇಲಾಖೆ ಡಿಇಒ ಅಚಲ್ ಮಲ್ಹೋತ್ರಾ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಪ್ರವೇಶವಕಾಶವಿದ್ದ ಹಿನ್ನೆಲೆಯಲ್ಲಿ ಗುರುವಾರ ವಾಯುನೆಲೆಗೆ ಜನ ಸಾಗರ ಹರಿದುಬಂದಿತ್ತು. ಬೆಳಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶವನ್ನು ಜನ ವೀಕ್ಷಿಸಿದ್ದಾರೆ. ವಿವಿಧ ಕೆಟಗರಿಯಲ್ಲಿ ಟಿಕೆಟ್ ನೀಡಲಾಗಿತ್ತು. ಪ್ರದರ್ಶನ ಮಳಿಗೆ, ವಿದ್ಯಾರ್ಥಿಗಳು, ವಿವಿಧ ದೇಶದ ಪ್ರತಿನಿಧಿಗಳು, ಸೇನಾ ಸಿಬ್ಬಂದಿ, ಕುಟುಂಬಸ್ಥರು ಸೇರಿ 2 ಲಕ್ಷ ಜನ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದರು.
ಜ್ಞಾನ ಭಂಡಾರ
ಮೂರು ದಿನಗಳ ಕಾಲ ಒಡಂಬಡಿಕೆ, ಹೂಡಿಕೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದ ಪ್ರದರ್ಶಕ ಮಳಿಗೆಗಳು ಗುರುವಾರ ಜ್ಞಾನ ಭಂಡಾರಗಳಾಗಿದ್ದವು. ವಿದ್ಯಾರ್ಥಿಗಳು, ಸೇನಾ ವಿಷಯಾಸಕ್ತರು ಪ್ರದರ್ಶನ ಮಳಿಗೆಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕಾರ್ಯನಿರ್ವಣೆಯ ಬಗೆ, ಕಾರ್ಯಾಚರಣೆ ಮಾಹಿತಿ, ಹೊಸದಾಗಿ ಸೇನೆಗೆ ಸೇರ್ಪಡೆ ಆಗುತ್ತಿರುವ ಉಪಕರಣಗಳು, ಆಧುನಿಕ ತಂತ್ರಜ್ಞಾನಗಳ ಮಾಹಿತಿಯನ್ನು ಪಡೆದರು. ಎಲ್ಲ ಸ್ಟಾಲ್‌ಗಳು ಜನರಿಂದ ಭರ್ತಿಯಾಗಿತ್ತು.
ಅಮೆರಿಕ ಬ್ಯಾಂಡ್‌ಗೆ ಫಿದಾ
ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್ ‘ಫೈನಲ್ ಅಪ್ರೋಚ್‘ ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಸಂಗೀತ ಕಾರ್ಯಕ್ರಮ ನೀಡಿತು. ವೇದಿಕೆಯೆದುರು ಸೇರಿದ ನೂರಾರು ಜನ ವೆಸ್ಟ್ರನ್ ಮ್ಯೂಸಿಕ್‌ಗೆ ಮನಸೋತು ಕುಣಿದು ಕುಪ್ಪಳಿಸಿದರು. ಶಾರುಕ್ ಖಾನ್ ‘ಕಲ್ ಹೋ ನ ಹೋ’ ತುಣಕನ್ನು ಹಾಡಿದ ಬ್ಯಾಂಡ್ ಸದಸ್ಯರು ರಂಜಿಸಿದರು.
Airshow: ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿ ಗಮನಸೆಳೆದ ವಾಯುಸೇನೆಯ ಐಶ್ವರ್ಯ, ಗೋಕುಲ್ ವಾಸು
ಸೇನಾ ಬಟ್ಟೆಗೆ ಡಿಮ್ಯಾಂಡ್
ವಾಯುನೆಲೆ ಸೇನಾ ಕಲ್ಯಾಣ ಸಂಘಗಳ ಸ್ಟಾಲ್‌ಗಳಲ್ಲಿದ್ದ ಬಗೆಬಗೆಯ ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದರು. ಸೇನೆಯ ಜರ್‌ಕಿನ್, ಕ್ಯಾಪ್, ಬ್ಯಾಡ್ಜ್, ಟೀ ಶರ್ಚ್, ಮಕ್ಕಳ ಆಟಿಕೆ ವಿಮಾನ, ಮನೆಯ ಶೋಕೆಸ್‌ನಲ್ಲಿ ಇಡುವ ಮಾಡೆಲ್‌ಗಳನ್ನು ಜನ ಇಷ್ಟಪಟ್ಟು ಖರೀದಿಸಿದರು. ಸೇನಾ ಮಹಿಳಾ ಸಂಘಗಳು ತಯಾರಿಸಿದ್ದ ಸಾಂಬಾರ್ ಪದಾರ್ಥಗಳಿಗೂ ಹೆಚ್ಚಿನ ಬೇಡಿಕೆ ಇತ್ತು. ಚರ್ಮದ ಹಣದ ಹುಂಡಿ, ಕಿವಿಯೋಲೆ, ಬಳೆ, ಮಹಿಳೆಯರ ಉಡುಪುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಜರ್‌ಕಿನ್‌ಗೆ .3 ಸಾವಿರ, ಬ್ಯಾಗ್‌ಗೆ .600-800, ಮಾಡೆಲ್‌ಗಳಿಗೆ .600-900 ರವರೆಗೆ ಬೆಲೆಯಿದೆ.
ಗ್ರಿಪೆನ್-ಇ ಸೆಲ್ಫಿ
ಸಾಬ್ ನಿರ್ಮಿತ ಗ್ರಿಪೆನ್-ಇ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಜನತೆ ಉದ್ದನೆಯ ಸಾಲುಗಟ್ಟಿನಿಂತು ವಿಮಾನದಲ್ಲಿ ಕುಳಿತು ಫೋಟೋ ತೆಗೆಸಿಕೊಂಡರು. ಇವುಗಳ ಜೊತೆಗೆ ಇಂಡಿಯನ್ ಪೆವಿಲಿಯನ್‌ನಲ್ಲಿದ್ದ ಬ್ರಹ್ಮೋಸ್, ಎಚ್‌ಎಲ್ ಮಳಿಗೆಯಲ್ಲಿದ್ದ ತೇಜಸ್, ಡಿಆರ್‌ಡಿಒ ಮಳಿಗೆಯಲ್ಲಿದ್ದ ಕಾಪ್ಟರ್‌ಗಳ ಎದುರು ನಿಂತು ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
