ಲಖನೌ(ಜ.09): 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಸೇರಿದಂತೆ 32 ಮಂದಿಯನ್ನು ಖುಲಾಸೆಗೊಳಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ಸಿಬಿಐ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿದೆ. ಅಯೋಧ್ಯೆಯ ಇಬ್ಬರು ನಿವಾಸಿಗಳು ತೀರ್ಪು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಅಡ್ವಾಣಿ ಸೇರಿ 32 ಆರೋಪಿಗಳಿಗೆ ಮತ್ತೆ ಸಂಕಷ್ಟಎದುರಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲೇ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದರೂ ಈವರೆಗೂ ಸಿಬಿಐ ಮೇಲ್ಮನವಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅಯೋಧ್ಯೆಯ ಹಾಜಿ ಮಹಬೂಬ್‌ ಹಾಗೂ ಹಾಜಿ ಸಯ್ಯದ್‌ ಅಖ್ಲಖ್‌ ಅಹಮದ್‌ ಅವರು ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪರವಾಗಿ ದಾವೆ ಹೂಡಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಶ್ರೀರಾಮನ ಜನ್ಮಸ್ಥಳದ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ 28 ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು. ಈ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್‌ ಸೆಪ್ಟೆಂಬರ್‌ನಲ್ಲಿ 2300 ಪುಟಗಳ ತೀರ್ಪು ಪ್ರಕಟಿಸಿ, ಆರೋಪಿಗಳ ವಿರುದ್ಧ ನಿರ್ದಿಷ್ಟಸಾಕ್ಷ್ಯ ಇಲ್ಲ ಎಂಬ ಕಾರಣ ನೀಡಿ ಎಲ್ಲರನ್ನೂ ಖುಲಾಸೆಗೊಳಿಸಿತ್ತು.