ನವದೆಹಲಿ[ಫೆ.20]: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ರಚಿತವಾದ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ’ ಅಧ್ಯಕ್ಷರಾಗಿ ಮಹಾಂತ ನೃತ್ಯ ಗೋಪಾಲ್‌ ದಾಸ್‌ ಆಯ್ಕೆಯಾಗಿದ್ದಾರೆ. ಮಂಗಳವಾರ ಇಲ್ಲಿ ನಡೆದ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಇದೇ ವೇಳೆ ಚಂಪತ್‌ರಾಯ್‌ ಅವರನ್ನು ಟ್ರಸ್ಟ್‌ನ ಪ್ರಧಾನ ಕಾರ‍್ಯದರ್ಶಿಯನ್ನಾಗಿ, ಸ್ವಾಮಿ ಗೋವಿಂದ್‌ದೇವ್‌ ಗಿರಿ ಅವರನ್ನು ಖಜಾಂಜಿಯಾಗಿ ಆಯ್ಕೆ ಮಾಡಲಾಯಿತು. ಇನ್ನು ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥರಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಯಿತು. ಟ್ರಸ್ಟ್‌ನ ಮೊದಲ ಸಭೆ ಹಿರಿಯ ವಕೀಲ ಕೆ. ಪರಾಶರನ್‌ ನಿವಾಸದಲ್ಲಿ ಬುಧವಾರ ನಡೆಯಿತು.

ಕರ್ನಾಟಕದ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಸೇರಿದಂತೆ ಟ್ರಸ್ಟ್‌ನ ಎಲ್ಲಾ ಸದಸ್ಯರು ಸಭೆಯಲ್ಲಿಲ್ಲಿ ಭಾಗಿಯಾಗಿದ್ದರು.

ಏನೇನು ಚರ್ಚೆ, ನಿರ್ಣಯ?

ರಾಮಮಂದಿರ ಹೋರಾಟದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಮಂದಿರಕ್ಕೆ ಅವಕಾಶ ಮಾಡಿಕೊಟ್ಟಸುಪ್ರೀಂಕೋರ್ಟ್‌ಗೆ ಕೃತಜ್ಞತೆ ಸಲ್ಲಿಕೆ

ರಾಮಮಂದಿರ ನಿರ್ಮಾಣಕ್ಕೆ ನೆರವಾದ ಪ್ರಧಾನಿ ಮೋದಿಗೆ ಅಭಿನಂದನೆ

ಅಯೋಧ್ಯೆಯ ಎಸ್‌ಬಿಐ ಖಾತೆ ತೆರೆದು, ದೇಣಿಗೆ ಸಂಗ್ರಹಕ್ಕೆ ನಿರ್ಧಾರ

ಕಾಮಗಾರಿ ತ್ವರಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ನಿರ್ಧಾರ

ಕಾಮಗಾರಿ ಆರಂಭ ಮುಹೂರ್ತ ನಿರ್ಧಾರ ಹೊಣೆ ನಿರ್ಮಾಣ ಸಮಿತಿಗೆ

ಮಂದಿರಕ್ಕೆ ಮೊದಲ ದೇಣಿಗೆ ಉಡುಪಿ ಮಠದ್ದು

ರಾಮಮಂದಿರ ನಿರ್ಮಾಣಕ್ಕೆ ಉಡುಪಿ ಮಠದ ವತಿಯಿಂದ 5 ಲಕ್ಷ ರುಪಾಯಿಗಳನ್ನು ನೀಡಲಾಯಿತು. ಮಂಗಳವಾರ ನಡೆದ ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ದೇಣಿಗೆಯನ್ನು ಟ್ರಸ್ಟ್‌ನ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಇದು ಮಂದಿರಕ್ಕೆ ಸಲ್ಲಿಕೆಯಾದ ಮೊದಲ ದೇಣಿಗೆಯಾಗಿದೆ.