Asianet Suvarna News Asianet Suvarna News

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಏನೆಲ್ಲ ಸೌಲಭ್ಯಗಳು ಸಿಗುತ್ತೆ ನೋಡಿ..!

ರಾಮನಾಥ್‌ ಕೋವಿಂದ್ ರಾಷ್ಟ್ರಪತಿ ಭವನ ತೊರೆದಿದ್ದು ಇನ್ಮುಂದೆ ಲುಟ್ಯೆನ್ಸ್‌ ಬಂಗಲೆಯಲ್ಲಿರಲಿದ್ದಾರೆ. ದೆಹಲಿಯಲ್ಲಿರುವ ಈ ಸಂಪೂರ್ಣ ಸುಸಜ್ಜಿತ ಅದ್ದೂರಿ ಬಂಗಲೆಯಲ್ಲಿ ರಾಮನಾಥ್‌ ಕೋವಿಂದ್‌ ಹಾಗೂ ಕುಟುಂಬ ತಂಗಲಿದೆ. ಇದಿಷ್ಟೇ ಅಲ್ಲ, ತಮ್ಮ ಜೀವನದಾದ್ಯಂತ ಅವರು ಪ್ರತಿ ತಿಂಗಳು 2.5 ಲಕ್ಷ ರೂ. ಪಿಂಚಣಿ ಪಡೆಯಲಿದ್ದಾರೆ. 

2.5 lakh pension lutyens bungalow among retirement benefits for ramnath kovind ash
Author
Bangalore, First Published Jul 25, 2022, 6:27 PM IST

ಭಾರತದ 14ನೇ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಸೋಮವಾರ ತಮ್ಮ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಜುಲೈ 25, 2017ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾಮನಾಥ್‌ ಕೋವಿಂದ್ ಇಂದು ಅದೇ ದಿನ ತಮ್ಮ ಅಧಿಕಾರವನ್ನು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಇನ್ನು, ರಾಷ್ಟ್ರಪತಿ ಭವನ ತೊರೆದ ರಾಮನಾಥ್‌ ಕೋವಿಂದ್ ಮುಂದೆ ಎಲ್ಲಿರಲಿದ್ದಾರೆ, ಅವರಿಗೆ ಪೆನ್ಷನ್‌ ಏನಾದರೂ ಬರುತ್ತದಾ ಎಂಬ ಬಗ್ಗೆ ನಿಮಗೆ ಗೊಂದಲಗಳಿರಬಹುದು ಅಲ್ಲವಾ..? ಈ ಬಗ್ಗೆ ಇಲ್ಲಿದೆ ವಿವರ..

ಭಾರತದ 14ನೇ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್ ರಾಷ್ಟ್ರಪತಿ ಭವನ ತೊರೆದಿದ್ದು ಅವರು ಇನ್ಮುಂದೆ ರಾಷ್ಟ್ರ ರಾಜಧಾನಿಯ ಲುಟ್ಯೆನ್ಸ್‌ ಬಂಗಲೆಯಲ್ಲಿರಲಿದ್ದಾರೆ. (Lutyens Bungalow)  ದೆಹಲಿಯಲ್ಲಿರುವ ಈ ಸಂಪೂರ್ಣ ಸುಸಜ್ಜಿತ ಅದ್ದೂರಿ ಬಂಗಲೆಯಲ್ಲಿ ರಾಮನಾಥ್‌ ಕೋವಿಂದ್‌ ಹಾಗೂ ಕುಟುಂಬ ತಂಗಲಿದೆ. ಇದಿಷ್ಟೇ ಅಲ್ಲ, ತಮ್ಮ ಜೀವನದಾದ್ಯಂತ ರಾಮನಾಥ್‌ ಕೋವಿಂದ್‌ಗೆ ಪ್ರತಿ ತಿಂಗಳು 2.5 ಲಕ್ಷ ರೂ. ಪಿಂಚಣಿ (Pension) ಹಣ ಬರಲಿದೆ. 

ಇದನ್ನೂ ಓದಿ: ದ್ರೌಪದಿ ನನ್ನ ಮೂಲ ಹೆಸರಲ್ಲ, ನೂತನ ರಾಷ್ಟ್ರಪತಿಯ ಮೊದಲ ಹೆಸರು ಬಹಿರಂಗ!

ಅಲ್ಲದೆ, ಮಾಜಿ ರಾಷ್ಟ್ರಪತಿಗಳಿಗೂ ಸಹ ಒಬ್ಬರು ಖಾಸಗಿ ಕಾರ್ಯದರ್ಶಿ, ಒಬ್ಬರು ಹೆಚ್ಚುವರಿ ಖಾಸಗಿ ಕಾರ್ಯದರ್ಶಿ, ಒಬ್ಬರು ಆಪ್ತ ಸಹಾಯಕರು, ಇಬ್ಬರು ಜವಾನರು ಮತ್ತು ವಾರ್ಷಿಕ 1 ಲಕ್ಷ ರೂ. ವರೆಗಿನ ಕಚೇರಿ ವೆಚ್ಚಗಳನ್ನು ಒಳಗೊಂಡಿರುವ ಕಾರ್ಯದರ್ಶಿ ಸಿಬ್ಬಂದಿಗೆ ಅರ್ಹರಾಗಿರುತ್ತಾರೆ.

ಅಧ್ಯಕ್ಷರ ವೇತನ ಮತ್ತು ಪಿಂಚಣಿ ಕಾಯಿದೆ, 1951 ರಡಿ ರಾಮನಾಥ್‌ ಕೋವಿಂದ್‌ ಸೇರಿ ಎಲ್ಲ ಮಾಜಿ ರಾಷ್ಟ್ರಪತಿಗಳಿಗೆ ಉಚಿತ ವೈದ್ಯಕೀಯ ಹಾಜರಾತಿ ಮತ್ತು ಚಿಕಿತ್ಸೆ, ಹಾಗೂ ವಿಮಾನ (Flight), ರೈಲು (Train), ಅಥವಾ ಸ್ಟೀಮರ್ (Steamer) ಮೂಲಕ ಒಬ್ಬ ವ್ಯಕ್ತಿಯೊಂದಿಗೆ ಭಾರತದಲ್ಲಿ ಎಲ್ಲಿಯಾದರೂ ಅತ್ಯುನ್ನತ ದರ್ಜೆಯ ಪ್ರಯಾಣ ಮಾಡುವ ಅರ್ಹತೆಯೂ ಇದೆ.
ದೇಶದ ರಾಷ್ಟ್ರಪತಿಗಳಿಗೆ ಪ್ರತಿ ತಿಂಗಳು 5 ಲಕ್ಷ ರೂ. ವೇತನ ದೊರೆಯುತ್ತದೆ. ಇನ್ನೊಂದೆಡೆ, ಅಧಿಕಾರ ತೊರೆದ ಬಳಿಕ ಅಥವಾ ರಾಜೀನಾಮೆ ನೀಡಿದ ಬಳಿಕ ಮಾಜಿ ರಾಷ್ಟ್ರಪತಿಗಳಿಗೆ ಆ ವೇತನದ ಶೇ. 50 ರಷ್ಟು ಅಂದರೆ 2. 5 ಲಕ್ಷ ರೂ. ಪಿಂಚಣಿ ದೊರೆಯುತ್ತದೆ. ಅಧ್ಯಕ್ಷರ ವೇತನ ಮತ್ತು ಪಿಂಚಣಿ ಕಾಯಿದೆ, 1951 ರಡಿ ಅವರ ಜೀವನಪರ್ಯಂತ ಪ್ರತಿ ತಿಂಗಳು ಈ ಪಿಂಚಣಿ ಹಣ ಸಿಗುತ್ತದೆ ಎಂದು ತಿಳಿದುಬಂದಿದೆ.

ಆದರೆ, ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಆ ವ್ಯಕ್ತಿ ಉಪ ರಾಷ್ಟ್ರಪತಿಯಾಗಿದ್ದರೆ ಉಪಾಧ್ಯಕ್ಷರ ಪಿಂಚಣಿ ಕಾಯಿದೆ, 1997 ರಡಿ ಅವರಿಗೆ ಯಾವುದೇ ಪಿಂಚಣಿ ಸಿಗುವುದಿಲ್ಲ. 
1951 ರ ಕಾಯಿದೆಯಡಿ ಮಾಜಿ ರಾಷ್ಟ್ರಪತಿಗಳು ತಮ್ಮ ಜೀವನದುದ್ದಕ್ಕೂ, ಸುಸಜ್ಜಿತ ನಿವಾಸವನ್ನು (ಅದರ ನಿರ್ವಹಣೆಯನ್ನು ಒಳಗೊಂಡಂತೆ) ಬಾಡಿಗೆ ಪಾವತಿಸದೆ ಬಳಸಲು ಅರ್ಹರಾಗಿರುತ್ತಾರೆ. ಅಲ್ಲದೆ, ಅವರಿಗೆ ಎರಡು ದೂರವಾಣಿಗಳು (Telephone) (ಒಂದು ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕಾಗಿ), ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಒಂದು ಮೊಬೈಲ್ ಫೋನ್ ಸೌಲಭ್ಯ, ಮತ್ತು ಕಾರು, ಅಥವಾ ಕಾರನ್ನು ಪಡೆಯಲು ಭತ್ಯೆ ಸಹ ದೊರೆಯುತ್ತದೆ.

ರಾಷ್ಟ್ರಪತಿ ಪದವಿಗೆ ಏರಿದ್ದು ನನ್ನ ಸಾಧನೆಯಲ್ಲ, ದೇಶದ ಬಡವರ ಸಾಧನೆ!

ಮಾಜಿ ರಾಷ್ಟ್ರಪತಿ ಮೃತಪಟ್ಟರೆ ಅವರ ಕುಟುಂಬಕ್ಕೇನು ದೊರೆಯುತ್ತದೆ..?
ಇನ್ನು,  ರಾಷ್ಟ್ರಪತಿಯಾಗಿದ್ದವರು ಒಂದು ವೇಳೆ ಅಧಿಕಾರದಲ್ಲಿದ್ದಾಗ ಮೃತಪಟ್ಟರೆ ಅಥವಾ ಅವರು ರಾಜೀನಾಮೆ ನೀಡಿದ ಬಳಿಕ ಹಾಗೂ ಅಧಿಕಾರ ತ್ಯಜಿಸಿದ ಬಳಿಕ ಮರಣ ಹೊಂದಿದರೂ, ರಾಷ್ಟ್ರಪತಿಗಳ ಸಂಗಾತಿಗೆ ಅವರ ಜೀವನದುದ್ದಕ್ಕೂ, ಮಾಜಿ ರಾಷ್ಟ್ರಪತಿ ಪಡೆಯುವ ಮೊತ್ತದ ಶೇಕಡಾ 50 ರಷ್ಟು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಹ ಕಾನೂನು ಹೇಳುತ್ತದೆ. ಸಂಗಾತಿಯು ವೈದ್ಯಕೀಯ ಹಾಜರಾತಿ ಮತ್ತು ಜೀವನದುದ್ದಕ್ಕೂ ಉಚಿತ ಚಿಕಿತ್ಸೆಗೆ ಸಹ ಅರ್ಹನಾಗಿರುತ್ತಾರೆ,  ಅಂತಹ ಸಂಗಾತಿಯು ಸಹ ಪರವಾನಗಿ ಶುಲ್ಕವನ್ನು ಪಾವತಿಸದೆಯೇ ಸುಸಜ್ಜಿತ ನಿವಾಸವನ್ನು (ಅದರ ನಿರ್ವಹಣೆಯನ್ನು ಒಳಗೊಂಡಂತೆ) ಬಳಸಲು ಅರ್ಹರಾಗಿರುತ್ತಾರೆ. ಹಾಗೂ, ಅವರು ಖಾಸಗಿ ಕಾರ್ಯದರ್ಶಿ ಮತ್ತು ಸಿಬ್ಬಂದಿಯನ್ನು ಒಳಗೊಂಡಿರುವ ಕಾರ್ಯದರ್ಶಿ ಸಿಬ್ಬಂದಿಗೆ ಅರ್ಹರಾಗಿರುತ್ತಾರೆ ಮತ್ತು ವಾರ್ಷಿಕ 20,000 ರೂ.ವರೆಗಿನ ಕಚೇರಿ ವೆಚ್ಚಗಳು ಸಹ ದೊರೆಯುತ್ತದೆ.

ಸಂಗಾತಿಯು, ಮಾಜಿ ರಾಷ್ಟ್ರಪತಿಯಂತೆಯೇ, ಉಚಿತ ದೂರವಾಣಿ ಮತ್ತು ಕಾರಿಗೆ ಅಥವಾ ಅವರ ಜೀವನದುದ್ದಕ್ಕೂ ಅಂತಹ ಕಾರು ಭತ್ಯೆಗೆ ಅರ್ಹರಾಗಿರುತ್ತಾರೆ ಮತ್ತು ವಿಮಾನ, ರೈಲು, ಅಥವಾ ಸ್ಟೀಮರ್‌ನಲ್ಲಿ ತನ್ನ ಒಡನಾಡಿ ಅಥವಾ ಸಂಬಂಧಿ ಜೊತೆಗೆ ದೇಶದ ಎಲ್ಲಿಂದಲಾದರೂ 12 ಉನ್ನತ ದರ್ಜೆಯ ಏಕ ಪ್ರಯಾಣಗಳನ್ನು ಸಹ ಅನುಮತಿಸಲಾಗಿದೆ ಎಂದು ಕಾನೂನು ಹೇಳುತ್ತದೆ. 

Follow Us:
Download App:
  • android
  • ios