ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ 21 ಲಕ್ಷ ಫಾಲೋವರ್ಸ್ ಹೊಂದಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಓಂ ಪ್ರಕಾಶ್ ಬಿಷ್ಣೋಯ್ ಕೇವಲ 33 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ. ಇವರ ಸೋಲಿಗೆ ಕಾರಣ ಏನು ಗೊತ್ತಾ?
ರಾಜಸ್ಥಾನದ ಪಂಚಾಯತ್ ಚುನಾವಣೆಯ ಮೊದಲ ಹಂತದ ಫಲಿತಾಂಶಗಳು ಪ್ರಕಟ ಆಗುತ್ತಿವೆ. ಅದರಲ್ಲಿ ಒಂದು ಚುನಾವಣೆಯ ಫಲಿತಾಂಶ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 21 ಲಕ್ಷ ಫಾಲೋವರ್ಸ್ ಹೊಂದಿರುವ ಈ ವ್ಯಕ್ತಿ, ಚುನಾವಣೆಯಲ್ಲಿ ಗಳಿಸಿದ ಮತ ನೋಡಿ ಆಘಾತಕ್ಕೆ ಒಳಗಾಗಿದ್ದಾನೆ.
ಹೌದು ರಾಜಸ್ಥಾನದ ಫಲೋಡಿಯಿಂದ ಬಂದಿರುವ ಚುನಾವಣಾ ಫಲಿತಾಂಶ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಹೆಸರು ಓಂ ಪ್ರಕಾಶ್ ಬಿಷ್ಣೋಯ್. ಈ ವ್ಯಕ್ತಿಯ ವಿಡಿಯೋಗಳನ್ನ ನೀವೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ನೀಡಿರಬಹುದು. ಅವರ ದೇಸಿಯ ಶೈಲಿಯ ಊಟದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅವರು ಚುನಾವಣೆಗೆ ನಿಂತು ಭಾರೀ ಮುಖಭಂಗ ಅನುಭವಿಸಿದ್ದಾರೆ.
11 ಮತಗಳು ಮನೆಯವರೇ ಹಾಕಿದ್ದು
ಫಲೋಡಿಯ ಇಂದ್ರೋನ್ ಕಿ ಧನಿ 2 ಪಂಚಾಯತ್ನಿಂದ ಸ್ಪರ್ಧಿಸಿದ್ದರು. 1600 ಮತಗಳನ್ನ ಹೊಂದಿದ್ದ ಕ್ಷೇತ್ರದಲ್ಲಿ ಅವರು ಕೇವಲ 33 ಮತಗಳನ್ನ ಪಡೆದು ಹೀನಾಯವಾಗಿ ಸೋಲನ್ನ ಅನುಭವಿಸಿದ್ದಾರೆ. ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು.. ನಾನು ಬಹಳ ಸಮಯದಿಂದ ಧಾರ್ಮಿಕ ಚಟುವಟಕೆಗಳನ್ನ ನಡೆಸುತ್ತಿದ್ದೇನೆ. ಹೆಚ್ಚಿ ಸಂಖ್ಯೆಯ ಹಸುಗಳನ್ನ ನೋಡಿಕೊಳ್ಳುತ್ತಿದ್ದು, ಗೋವುಗಳ ಸೇವೆ ಮಾಡುತ್ತಿದ್ದೇನೆ. ಅದರ ಜೊತೆಗೆ ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ನಾನು ಚುನಾವಣೆಗೆ ನಿಂತಿದ್ದೆ. ನಾನು ಸರಪಂಚ್ ಸ್ಥಾನಕ್ಕೆ ನಿಂತಿದ್ದೆ. ಆದರೆ ಜನರ ಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೂ ಮೊದಲೇ ನಾನು ಜನರ ಸೇವೆಯಲ್ಲಿ ಇದ್ದೆ. ಚುನಾವಣೆ ನಿಂತ ಮೇಲೆ ಖುದ್ದು ಎಲ್ಲಾ ಮತದಾರರನ್ನೂ ಭೇಟಿಯಾಗಿದ್ದೆ. ಈ ವೇಳೆ ನಾನು ಜನರಿಗೆ ಶುದ್ಧ ತುಪ್ಪದಿಂದ ತಯಾರಿಸಿದ್ದ ಆಹಾರ ನೀಡಿದ್ದೆ. ತುಪ್ಪದಲ್ಲಿ ಮಾಡಿದ್ದ ಅಡುಗೆಗಳನ್ನ ನೀಡಿದ್ದೆ. ಅದಕ್ಕಾಗಿ ನಾನು ಅಡುಗೆ ಸಿಬ್ಬಂದಿಯನ್ನೇ ನೇಮಿಸಿಕೊಂಡಿದ್ದೆ. ನಾನು ಜನರನ್ನ ಭೇಟಿಯಾದಾಗ ನನಗೆ ಬೆಂಬಲ ನೀಡೋದಾಗಿ ಹೇಳಿದರು. ಆದರೆ ಚುನಾವಣಾ ಫಲಿತಾಂಶ ಬಂದ ಮೇಲೆ ನಿಜಕ್ಕೂ ಆಘಾತ ಆಯಿತು.
ಯಾಕೆಂದರೆ ನನ್ನ ಪಂಚಾಯತ್ನಲ್ಲಿ ಒಟ್ಟು ನಾಲ್ಕು ಸ್ಪರ್ಧಿಗಳು ನಿಂತಿದ್ದರು. ಅದರಲ್ಲಿ 40 ಮತಗಳು ನೋಟಾ ಬಿದ್ದಿವೆ. ನನಗೆ ಕೇವಲ 33 ಮತಗಳು ಬಂದಿವೆ. ಅದರಲ್ಲಿ 11 ಮತಗಳು ನನ್ನ ಕುಟುಂಬದಿಂದ ಬಂದಿರೋದು. ಇನ್ನುಳಿದ ಮತಗಳನ್ನ ಸ್ನೇಹಿತರು ಹಾಕಿದ್ದಾರೆ ಅಷ್ಟೇ. ನನ್ನ ಸೋಲಿಗೆ ಪ್ರಮುಖ ಕಾರಣ ಡ್ರಗ್ಸ್. ಈ ಡ್ರಗ್ಸ್ ವಿರುದ್ಧ ನಾನು ಯಾವಾಗಲೂ ಹೋರಾಟ ಮಾಡುತ್ತ ಇರುತ್ತೇನೆ. ನಾನು ಅವರಂತೆ ಮದ್ಯ ವಿತರಣೆ ಮಾಡಲಿಲ್ಲ. ನಮ್ಮ ದೇಶದಲ್ಲಿ ಇನ್ನೂ ಕೂಡ ಮದ್ಯ ಪಡೆದು ವೋಟ್ ಮಾಡೋರು ಇದ್ದಾರೆ. ಆದರೆ ನನಗೆ ಅಂಥ ಮನಸ್ಥಿತಿ ಇಲ್ಲ. ಇದೇ ಕಾರಣಕ್ಕೆ ನಾನು ಸೋಲನ್ನು ಕಂಡಿದ್ದೇನೆ.
ಬಿಷ್ಣೋಯ್ ಅವರು ಇನ್ಸ್ಟಾಗ್ರಾಮ್ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಫೇಸ್ಬುಕ್ನಲ್ಲಿ 2,32000 ಫಾಲೋವರ್ಸ್ ಹೊಂದಿದ್ದಾರೆ. ಯೂಟ್ಯೂಬ್ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಸಬ್ಕ್ರೈಬರ್ಸ್ ಇದ್ದಾರೆ.







