ನವದೆಹಲಿ(ಏ.10): ಕೊರೋನಾ 2ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆ ಕೇಂದ್ರ ಸರ್ಕಾರ ಸೂಚನೆಗಳನ್ನು ನೀಡುತ್ತಿರುವಾಗಲೇ, ದೇಶದಲ್ಲಿ ಮಾ.31ರವರೆಗೆ ಕೊರೋನಾ ಲಸಿಕೆ ಪಡೆದ ಜನರ ಪೈಕಿ 180 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ನಾಲ್ಕನೇ ಮೂರರಷ್ಟುಜನರು ಅಂದರೆ ಶೇ.75ರಷ್ಟುಮಂದಿ ಲಸಿಕೆ ಪಡೆದ ಮೂರೇ ದಿನದಲ್ಲಿ ಅಸುನೀಗಿದ್ದಾರೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಲಸಿಕೆ ಪಡೆದ ಬಳಿಕ ಉಂಟಾದ ಪ್ರತಿಕೂಲ ಪರಿಣಾಮಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿಗೆ ಈ ಕುರಿತ ಅಂಕಿ-ಸಂಖ್ಯೆಯನ್ನು ನೀಡಲಾಗಿದೆ. ಜ.16ರಂದು ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾಯಿತು. ಜ.27ರವರೆಗೆ ಲಸಿಕೆ ಪಡೆದವರಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಫೆ.26ರ ವೇಳೆಗೆ ಈ ಸಂಖ್ಯೆ 46ಕ್ಕೆ ಏರಿತು. ಮಾ.16ರ ವೇಳೆಗೆ 89ಕ್ಕೆ ತಲುಪಿತು. ಈ ನಡುವೆ, ಮಾ.16ರಿಂದ 29ರವರೆಗೆ 91 ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಲಸಿಕೆ ಪಡೆದ ಬಳಿಕ ಆಸ್ಪತ್ರೆ ಸೇರಿದ 305 ಜನರ ಪೈಕಿ 276 ಜನರು, ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡ 63 ಜನರ ಪೈಕಿ 55 ಮಂದಿಗೆ ಮೂರೇ ದಿನದಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಸಮಿತಿಗೆ ವಿವರಿಸಲಾಗಿದೆ.