Asianet Suvarna News Asianet Suvarna News

2 ಶಿಫ್ಟಲ್ಲಿ ಸಂಸತ್‌ ಕಲಾಪ: ಬೆಳಗ್ಗೆ ರಾಜ್ಯಸಭೆ, ಮಧ್ಯಾಹ್ನ ಲೋಕಸಭೆ ಕಲಾಪ,

ಇಂದಿನಿಂದ 2 ಶಿಫ್ಟಲ್ಲಿ ಸಂಸತ್‌ ಕಲಾಪ| ಕೊರೋನಾ ಹಿನ್ನೆಲೆ 18 ದಿನಗಳ ಕಾಲ ನಿತ್ಯ ಬೆಳಗ್ಗೆ ರಾಜ್ಯಸಭೆ, ಮಧ್ಯಾಹ್ನ ಲೋಕಸಭೆ ಕಲಾಪ| 20 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ವ ಪಕ್ಷ ಸಭೆ ಇಲ್ಲದೆ ಅಧಿವೇಶನ| 

18 Day Monsoon Session Of Parliament Begins Today Amid Covid
Author
Bangalore, First Published Sep 14, 2020, 8:28 AM IST

ನವದೆಹಲಿ(ಸೆ.14): ಕೊರೋನಾ ವೈರಸ್‌ ಅಬ್ಬರದ ನಡುವೆಯೇ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಹಿಂದೆಂದೂ ಕಂಡು-ಕೇಳರಿಯದ ರೀತಿಯಲ್ಲಿ ಕಲಾಪ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನು ಬಳಸಿಕೊಂಡು ಒಂದು ಸದನದ ಕಲಾಪ ನಡೆಸುವುದು, ಸಾಮಾಜಿಕ ಅಂತರಕ್ಕೆ ಒತ್ತು ನೀಡುವುದು, ಎರಡು ಪಾಳಿಗಳಲ್ಲಿ ಕಲಾಪ ನಡೆಸುವುದು ಸೇರಿದಂತೆ ಹಲವು ವಿಭಿನ್ನತೆಗಳಿಗೆ ಸಾಕ್ಷಿಯಾಗಲಿರುವ ಈ ಅಧಿವೇಶನ ಐತಿಹಾಸಿಕವೆನಿಸಿದೆ.

"

ಚೀನಾ ವಿರುದ್ಧದ ಗಡಿ ಸಂಘರ್ಷ, ಕೊರೋನಾ ನಿರ್ವಹಣೆ, ಆರ್ಥಿಕತೆ ಕುಸಿತ, ಜಿಎಸ್‌ಟಿ ನಷ್ಟಪರಿಹಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಕ್ಕ ತಿರುಗೇಟು ಕೊಡಲು ಆಡಳಿತಾರೂಢ ಬಿಜೆಪಿ ಕೂಡ ಸಜ್ಜಾಗಿದ್ದು, ವಿಭಿನ್ನ ಕಲಾಪದಲ್ಲೂ ಭರ್ಜರಿ ವಾಕ್ಸಮರವನ್ನು ನಿರೀಕ್ಷಿಸಲಾಗುತ್ತಿದೆ. ಸರ್ಕಾರ 45 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದ್ದು, ಆ ಪೈಕಿ ಕೆಲವನ್ನು ಅತ್ಯುಗ್ರವಾಗಿ ವಿರೋಧಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಏಕೆ ಈ ಕಲಾಪ ವಿಶೇಷ?:

ಒಂದು ಕಲಾಪದಿಂದ ಮತ್ತೊಂದಕ್ಕೆ 6 ತಿಂಗಳಿಗಿಂತ ಅಧಿಕ ಅಂತರವಿರಬಾರದು ಎಂಬ ನಿಯಮವಿದೆ. ಆದ ಕಾರಣ ಕೊರೋನಾ ನಡುವೆಯೇ ಮುಂಗಾರು ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಸೋಮವಾರದಿಂದ ಅ.1ರವರೆಗೆ ಕಲಾಪ ನಡೆಯಲಿದೆ. ಸಾಮಾನ್ಯವಾಗಿ ಶನಿವಾರ ಅದರಲ್ಲೂ ವಿಶೇಷವಾಗಿ ಭಾನುವಾರ ಕಲಾಪ ನಡೆಯುವುದಿಲ್ಲ. ಆದರೆ ಈ ಬಾರಿ ವಾರಾಂತ್ಯ, ಸರ್ಕಾರಿ ರಜೆ ಯಾವುದನ್ನೂ ಪರಿಗಣಿಸದೆ ಸತತ 18 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗುವ ಸಂಸದರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸದಸ್ಯರ ನಡುವೆ ಪಾಲಿಕಾರ್ಬನ್‌ ಶೀಟ್‌ಗಳನ್ನು ಅಳವಡಿಸಲಾಗಿದೆ. ಬೆಳಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಮಾತ್ರ ಬೆಳಗ್ಗೆ 9ರಿಂದ 1ರವರೆಗೆ ಲೋಕಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ನಡೆಯಲಿದೆ. ಮರುದಿನದಿಂದ ಬೆಳಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪ ನಿಗದಿಯಾಗಿದೆ.

ಒಂದು ಸದನದ ಕಲಾಪ ನಡೆಸಲು ಎರಡೂ ಸದನಗಳ ಸ್ಥಳಾವಕಾಶ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಾಮಾಜಿಕ ಅಂತರದೊಂದಿಗೆ ಲೋಕಸಭೆಯ ಸದಸ್ಯರು ರಾಜ್ಯಸಭೆಯಲ್ಲೂ ಕೂರಲಿದ್ದಾರೆ. ಕಲಾಪ ವೀಕ್ಷಣೆಗೆ ಬೃಹತ್‌ ಪರದೆ ಅಳವಡಿಸಲಾಗಿದೆ. ಸಂಸದರ ಹಾಜರಿ ನಮೂದಿಸಲು ಪುಸ್ತಕದ ಬದಲು ಮೊಬೈಲ್‌ ಆ್ಯಪ್‌ ಬಳಸಲಾಗುತ್ತಿದೆ. ಡಿಜಿಟಲ್‌ ವ್ಯವಹಾರ ನಡೆಸಿ ಕಾಗದ ಬಳಕೆ ತಗ್ಗಿಸಲು ನಿರ್ಧರಿಸಲಾಗಿದೆ.

ಲೋಕಸಭೆಯಲ್ಲಿ 257, ವೀಕ್ಷಕರ ಗ್ಯಾಲರಿಯಲ್ಲಿ 172, ರಾಜ್ಯಸಭೆಯಲ್ಲಿ 60, ವೀಕ್ಷಕರ ಗ್ಯಾಲರಿಯಲ್ಲಿ 51 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶ್ನೋತ್ತರ ಅವಧಿಯನ್ನು ಅರ್ಧಗಂಟೆಗೆ ಇಳಿಸಲಾಗಿದೆ. ಶೂನ್ಯವೇಳೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಂಡನೆಗೆ ಅವಕಾಶ ನೀಡಲಾಗಿದೆ. ಕೆಲವು ಹಿರಿಯ ಸದಸ್ಯರಿಗೆ ಚೇಂಬರ್‌ ವ್ಯವಸ್ಥೆ ಮಾಡಿ ಆಸನ ಸೌಕರ್ಯ ಕಲ್ಪಿಸಲಾಗಿದೆ.

ಏನೇನು ವಿಶೇಷ ಸಿದ್ಧತೆ?

- 2 ಪಾಳಿಗಳಲ್ಲಿ ಲೋಕಸಭೆ, ರಾಜ್ಯಸಭೆ ಕಲಾಪ

- ಭಾನುವಾರ, ರಜೆ ಸೇರಿ ಸತತ 18 ದಿನ ಅಧಿವೇಶನ

- ಒಮ್ಮೆ ಕಲಾಪಕ್ಕೆ ಎರಡೂ ಸದನದ ಸ್ಥಳ ಬಳಕೆ

-ಎಂಪಿ ಸೀಟುಗಳ ನಡುವೆ ಅಂತರ, ಪ್ಲಾಸ್ಟಿಕ್‌ ಶೀಟ್‌ ಅಳವಡಿಕೆ

-ಒಂದು ಅಧಿವೇಶನದ ಬಳಿಕ ಸದನ ಸಂಪೂರ್ಣ ಸ್ಯಾನಿಟೈಸ್‌

-ಹಿರಿಯ ಸಂಸದರಿಗೆ ವಿಶೇಷ ಚೇಂಬರ್‌

Follow Us:
Download App:
  • android
  • ios