Asianet Suvarna News Asianet Suvarna News

15 ಮಹಿಳೆಯರಿಗೆ ನಾರಿ ಶಕ್ತಿ ಪುರಸ್ಕಾರ: ಶತಾಯುಷಿ ಅಥ್ಲೀಟ್‌ಗೆ ಗೌರವ!

15 ಮಹಿಳೆಯರಿಗೆ ನಾರಿ ಶಕ್ತಿ ಪುರಸ್ಕಾರ| ಮಹಿಳಾ ದಿನದ ನಿಮಿತ್ತ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ|  ವಿಜೇತರಲ್ಲಿ ಅಣಬೆ ಬೆಳೆಗಾರ್ತಿ, ಶತಾಯುಷಿ ಅಥ್ಲೀಟ್‌, ಕಟ್ಟಡ ಕೆಲಸಗಾರ್ತಿ

15 outstanding women honoured with Nari Shakti Puraskar by President on International Women s Day
Author
Bangalore, First Published Mar 9, 2020, 10:46 AM IST

 ನವದೆಹಲಿ[ಮಾ.09]: ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ 15 ಮಹಿಳೆಯರಿಗೆ ಭಾನುವಾರ ವಿಶ್ವ ಮಹಿಳಾ ದಿನದ ನಿಮಿತ್ತ ‘ನಾರಿ ಶಕ್ತಿ ಪುರಸ್ಕಾರ’ ನೀಡಿ ಗೌರವಿಸಲಾಗಿದೆ. ಕಟ್ಟಡ ಕೆಲಸಗಾರ್ತಿ, ಶತಾಯುಷಿ ಅಥ್ಲೀಟ್‌, ಅಣಬೆ ಬೆಳೆಗಾರ್ತಿ ಕೂಡ ಇದರಲ್ಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ, ಕ್ರೀಡೆ, ಕರಕುಶಲ, ಅರಣ್ಯೀಕರಣ, ವನ್ಯಜೀವಿ ಸಂರಕ್ಷಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ 2019ನೇ ಸಾಲಿನ ಪ್ರಶಸ್ತಿ ಸಂದಿದೆ.

ನಾರಿ ಶಕ್ತಿ ಪುರಸ್ಕೃತರು ಹಾಗೂ ಅವರ ಸಾಧನೆಯ ಸಂಕ್ಷಿಪ್ತ ವಿವರ ಇಲ್ಲಿದೆ.

ವೀಣಾದೇವಿ:

ಬಿಹಾರದ ಮುಂಗೇರ್‌ ಜಿಲ್ಲೆಯವರಾದ ವೀಣಾದೇವಿ ಅಣಬೆ ಬೆಳೆಗಾರ್ತಿ. ಅಣಬೆ ಬೆಳೆದೇ ಇವರು ಸ್ವಾವಲಂಬನೆ ಸಾಧಿಸಿದರು. ಧೌರಿ ಗ್ರಾಮ ಪಂಚಾಯಿತಿಯ ಸರಪಂಚಳಾಗಿ 5 ವರ್ಷ ಕೆಲಸ ಮಾಡಿದರು. ಜೈವಿಕ ಕೃಷಿ, ಕಾಂಪೋಸ್ಟ್‌ ಉತ್ಪಾದನೆ, ಅಣಬೆ ಕೃಷಿ, ಜೈವಿಕ ಗೊಬ್ಬರದ ತರಬೇತಿಯನ್ನು 1500 ಮಹಿಳೆಯರಿಗೆ ಇವರು ನೀಡಿದ್ದಾರೆ. 700 ಮಹಿಳೆಯರಿಗೆ ಮೊಬೈಲ್‌ ಫೋನ್‌ ಹೇಗೆ ಬಳಸಬೇಕೆಂದೂ ಕಲಿಸಿಕೊಟ್ಟಿದ್ದಾರೆ.

103 ವರ್ಷದ ಮಾನ್‌ ಕೌರ್‌:

ಚಂಡೀಗಢದ ಪವಾಡಸದೃಶ ಮಹಿಳೆ ಮಾನ್‌ ಕೌರ್‌. 93ನೇ ವಯಸ್ಸಿನಲ್ಲಿ ಅಥ್ಲೀಟ್‌ ಆದರು. ಪೋಲಂಡ್‌ನಲ್ಲಿ ನಡೆದ ಹಿರಿಯರ ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದರು. ವಿಶ್ವದ ಅತಿವೇಗದ ಶತಾಯುಷಿ ಓಟಗಾರ್ತಿ ಎಂಬ ಖ್ಯಾತಿಗೆ 2016ರಲ್ಲಿ ಭಾಜನರಾದರು.

ಕಲಾವತಿ ದೇವಿ:

ವೃತ್ತಿಯಲ್ಲಿ ಕಟ್ಟಡ ಕಾರ್ಮಿಕಳು. ಉತ್ತರ ಪ್ರದೇಶದ ಕಾನ್ಪುರದವರು. ಬಯಲು ಬಹಿರ್ದೆಸೆ ವಿರುದ್ಧ ಆಂದೋಲನ ನಡೆಸಿದರು. 4 ಸಾವಿರ ಶೌಚಾಲಯ ನಿರ್ಮಾಣಕ್ಕೆ ಕಾರಣರಾದರು.

ಭೂದೇವಿ:

ವಿಧವೆಯರು, ಬುಡಕಟ್ಟು ಮಹಿಳೆಯರ ಉದ್ಧಾರಕ್ಕೆ ಶ್ರಮಿಸುತ್ತಿರುವ ಸಾಧಕಿ. ಚಿನನ್ನೈ ಆದಿವಾಸಿ ವಿಕಾಸ ಸೊಸೈಟಿ ಮೂಲಕ ಕೆಲಸ ಮಾಡುತ್ತಿದ್ದಾರೆ. ಬಾಲ್ಯವಿವಾಹಕ್ಕೆ ಒಳಗಾಗಿದ್ದ ಇವರು ಈಗ ತಮ್ಮ 3 ಹೆಣ್ಣುಮಕ್ಕಳನ್ನು ಸ್ವಂತ ಶಕ್ತಿಯಿಂದ ಬೆಳೆಸಿದ್ದಾರೆ.

ಆರೀಫಾ ಜಾನ್‌:

ಕಾಶ್ಮೀರದ ನುಮ್ದಾ ಕರಕುಶಲ ಕಲೆಯನ್ನು ದೇಶಾದ್ಯಂತ ಜನಪ್ರಿಯಗೊಳಿಸಿದವರು. 100ಕ್ಕೂ ಹೆಚ್ಚು ಮಹಿಳೆಯರಿಗೆ ಕಸೂತಿ ಕಲೆ ತರಬೇತಿ ನೀಡಿದ್ದಾರೆ. 25 ಕಾಶ್ಮೀರಿ ಕಸೂತಿ ಕಲೆಗಾರ್ತಿಯರನ್ನು ಕೆಲಸಕ್ಕಿಟ್ಟುಕೊಂಡು ಅವರ ವೇತನವನ್ನು ದಿನಕ್ಕೆ 175 ರು.ನಿಂದ 450 ರು.ಗೆ ಹೆಚ್ಚಿಸಿದ್ದಾರೆ.

ಚಾಮಿ ಮುರ್ಮು:

ಪರಿಸರವಾದಿ ಇವರು. ಜಾರ್ಖಂಡ್‌ನ ‘ಲೇಡಿ ಟಾರ್ಜನ್‌’ ಎಂದೇ ಹೆಸರು ಪಡೆದವರು. 25 ಲಕ್ಷ ಗಿಡಗಳನ್ನು ಬೆಳೆಸಿದ್ದಾರೆ. 3 ಸಾವಿರ ಮಹಿಳೆಯರನ್ನು ಒಟ್ಟುಗೂಡಿಸಿ ಈ ಕೆಲಸ ಮಾಡಿದ್ದಾರೆ. ನಕ್ಸಲೀಯರು ಹಾಗೂ ಮಾಫಿಯಾದಿಂದ ಅರಣ್ಯ ರಕ್ಷಿಸಿದ್ದಾರೆ.

ನೀಲ್ಜಾ ವಾಂಗ್ಮೊ:

40 ವರ್ಷದ ಈಕೆ ಲಡಾಖ್‌ನವರು. ರೆಸ್ಟೋರೆಂಟ್‌ ನಡೆಸುತ್ತಿದ್ದು, ಲಡಾಖಿ ಖಾದ್ಯಗಳನ್ನು ಉಣಬಡಿಸುವಲ್ಲಿ ಸಿದ್ಧಹಸ್ತರು. ಮರೆತುಹೋಗಿದ್ದ ಖಾದ್ಯಗಳನ್ನು ಮತ್ತೆ ಜನಮಾನಸಕ್ಕೆ ತಂದಿದ್ದಾರೆ.

ರಶ್ಮಿ ಊಧ್ರ್ವರ್ದೇಶೆ:

ಆಟೋಮೋಟಿವ್‌ ಕ್ಷೇತ್ರದಲ್ಲಿ ಪರಿಣತಿ ಪಡೆದವರು. ಈ ಕ್ಷೇತ್ರದಲ್ಲಿ 36 ವರ್ಷದಿಂದ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ.

ತಾಶಿ ಹಾಗೂ ನುಂಗ್ಶಿ ಮಲಿಕ್‌:

ಉತ್ತರಾಖಂಡದ ಈ ಅವಳಿ ಹೆಣ್ಣುಮಕ್ಕಳು 2013ರಲ್ಲಿ ಮೌಂಟ್‌ ಎವರೆಸ್ಟ್‌ ಏರಿದ್ದರು. ವಿದೇಶದ ಬೆಟ್ಟಗಳನ್ನೂ ಹತ್ತಿದ್ದಾರೆ.

ಕೌಶಿಕಿ ಚಕ್ರವರ್ತಿ:

ಭಾರತೀಯ ಶಾಸ್ತ್ರೀಯ ಗಾಯಕಿ. 38 ವರ್ಷದ ಇವರಿಗೆ 15 ವರ್ಷದ ಸಂಗೀತ ಅನುಭವವಿದೆ. ಖಯಾಲ್‌ ಹಾಗೂ ಠುಮರಿ ಗಾಯನದಲ್ಲಿ ನಿಷ್ಣಾತರು.

3 ವಾಯುಪಡೆ ಮಹಿಳಾ ಪೈಲಟ್‌ಗಳು:

ಅವನಿ ಚತುರ್ವೇದಿ, ಭಾವನಾ ಕಾಂತ್‌ ಹಾಗೂ ಮೋಹನಾ ಸಿಂಗ್‌ ಜಿತ್ರಾವಲ್‌ ವಾಯುಪಡೆಯ ಮಹಿಳಾ ಪೈಲಟ್‌ಗಳು. ಮಹಿಳೆಯರನ್ನೂ ಯುದ್ಧವಿಮಾನದ ಪೈಲಟ್‌ಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದ ನಂತರ ಕೆಲಸಕ್ಕೆ ಸೇರ್ಪಡೆಯಾದವರು. ಮೊದಲ ಮಹಿಳಾ ಯುದ್ಧವಿಮಾನ ಪೈಲಟ್‌ಗಳೆಂಬ ಖ್ಯಾತಿ ಇವರಿಗಿದೆ.

ಭಾಗೀರಥಿ ಅಮ್ಮ, ಕಾತ್ಯಾಯಿನಿ ಅಮ್ಮ:

ಭಾತೀರಥಿ ಅಮ್ಮನದು 103 ಹಾಗೂ ಕಾತ್ಯಾಯಿನಿ ಅಮ್ಮನದು 98 ವಯಸ್ಸು. ಇಷ್ಟೊಂದು ಇಳಿವಯಸ್ಸಿನಲ್ಲೂ ಕೇರಳದ ಸಾಕ್ಷರತಾ ಆಂದೋಲನದಲ್ಲಿ ಅಕ್ಷರ ಕಲಿತವರು. ಭಾಗೀರಥಿ ಅಮ್ಮ ಕೇರಳದ ಅತಿ ಹಿರಿಯ ವಿದ್ಯಾರ್ಥಿನಿ. 4ನೇ ತರಗತಿಯ ಸಮಾನಾಂತರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಾತ್ಯಾಯಿನಿ ಅಮ್ಮ 98 ಅಂಕ ಪಡೆದು ಮೊದಲ ರಾರ‍ಯಂಕ್‌ ಪಡೆದರು. ವಯಸ್ಸು 100 ಆದಾಗ 10ನೇ ತರಗತಿ ಪಾಸಾಗಬೇಕು ಹಾಗೂ ಕಂಪ್ಯೂಟರ ಕಲಿಯಬೇಕು ಎಂಬ ಆಸೆ ಕ್ತಾಯಾಯಿನಿ ಅಮ್ಮನದು.

Follow Us:
Download App:
  • android
  • ios